ADVERTISEMENT

ಪಾಸ್‌ಪೋರ್ಟ್‌ ಪ್ರತಿ ಒದಗಿಸಲು ಸೋನಿಯಾಗೆ ಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 19:30 IST
Last Updated 21 ಮಾರ್ಚ್ 2014, 19:30 IST

ನ್ಯೂಯಾರ್ಕ್ (ಪಿಟಿಐ): 1984ರ ಸಿಖ್‌ ಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ‘ನ್ಯಾಯಕ್ಕಾಗಿ ಸಿಖ್ಖರು’  ಸಂಘಟನೆ( ಎಸ್‌ಎಫ್‌ಜೆ) ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ, ಕೋರ್ಟ್ ಶುಕ್ರವಾರ ಸೋನಿಯಾ ಅವರಿಗೆ ಏಪ್ರಿಲ್ 7ರೊಳಗೆ ತಮ್ಮ ಪಾಸ್‌ಪೋರ್ಟ್‌ ಪ್ರತಿ ಒದಗಿಸುವಂತೆ ಸೂಚಿಸಿದೆ.

ಸೋನಿಯಾ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್‌ಗೆ ವೈದ್ಯಕೀಯ ಚಿಕಿತ್ಸೆಗಾಗಿ ಬಂದಿದ್ದಾಗ  ಗಲಭೆಗೆ ಸಂಬಂಧಿಸಿದಂತೆ ಮಾನವ ಹಕ್ಕು ಉಲ್ಲಂಘನೆ ಕುರಿತು ಸೋನಿಯಾ ಅವರಿಗೆ ಈ ಹಿಂದೆ ಕೋರ್ಟ್‌ ಜಾರಿ ಮಾಡಿದ್ದ ಸಮನ್ಸನ್ನು ತಾನು ಜಾರಿ ಮಾಡಿದ್ದಾಗಿ ಎಸ್‌್ಎಫ್‌ಜೆ ಸಮರ್ಥಿಸಿಕೊಂಡಿತ್ತು. ‘ಎಸ್‌ಎಫ್‌ಜೆ’ನ ಈ ಹೇಳಿಕೆಯನ್ನು ಅಲ್ಲಗಳೆದಿದ್ದ ಸೋನಿಯಾ ಪರ ವಕೀಲರು, ಅಂದು ತಮ್ಮ ಕಕ್ಷಿದಾರರು ಅಮೆರಿಕಕ್ಕೆ ಭೇಟಿ ನೀಡಿರಲೇ ಇಲ್ಲ ಎಂದು ಕೋರ್ಟ್‌ಗೆ ತಿಳಿಸಿದ್ದರು.

ಈ ಕುರಿತು ವಿಚಾರಣೆ ನಡೆಸಿದ ಮ್ಯಾನ್‌ಹಟನ್‌ ಫೆಡರಲ್‌ ಕೋರ್ಟ್‌ ಜಡ್ಜ್‌ ಬ್ರಯಾನ್ ಕೊಗನ್‌, ‘ಕಳೆದ ಸೆ. 2ರಿಂದ 12ರವರೆಗೆ ಸೋನಿಯಾ ಅವರು ಅಮೆರಿಕದಲ್ಲಿ ಇರಲಿಲ್ಲ ಎಂಬುದನ್ನು ಸೂಕ್ತವಾಗಿ ಧೃಡಪಡಿಸಿಲ್ಲ. ಹಾಗಾಗಿ, ದಾಖಲೆ ರೂಪದ ಸಾಕ್ಷ್ಯವಾಗಿ ಸೋನಿಯಾ ಅವರು ತಮ್ಮ ಪಾಸ್‌ಪೋರ್ಟ್‌ ಪ್ರತಿಯನ್ನು ಏಪ್ರಿಲ್‌ 7ರೊಳಗೆ ಕೋರ್ಟ್‌ಗೆ ಸಲ್ಲಿಸಬೇಕು’ ಎಂದು ಸೂಚಿಸಿದರು.

‘ಇದರಿಂದಾಗಿ ಸೋನಿಯಾ ಅವರು ಅಮೆರಿಕದಲ್ಲಿ ಇದ್ದರೋ ಅಥವಾ ಇರಲಿಲ್ಲವೋ ಎಂಬುದನ್ನು ಧೃಡಪಡಿಸಲು ಅನುಕೂಲವಾಗುತ್ತದೆ’ ಎಂದು ಕೊಗನ್‌ ಇದೇ ವೇಳೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.