ADVERTISEMENT

ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಆನೆ ಸಾವು

ಅಸ್ಸಾಂನಿಂದ ಬಾಂಗ್ಲಾದೇಶ ಕಡೆಗೆ ಕ್ರಮಿಸಿದ ಭಾರತದ ಆನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2016, 19:30 IST
Last Updated 16 ಆಗಸ್ಟ್ 2016, 19:30 IST
ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಕಾಡಾನೆಯನ್ನು ರಕ್ಷಿಸಲು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಮಸ್ಥರು ಕಾರ್ಯಾಚರಣೆ ನಡೆಸಿದ್ದರು
ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಕಾಡಾನೆಯನ್ನು ರಕ್ಷಿಸಲು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಮಸ್ಥರು ಕಾರ್ಯಾಚರಣೆ ನಡೆಸಿದ್ದರು   

ಢಾಕಾ (ಪಿಟಿಐ): ಕಳೆದ ತಿಂಗಳು ಅಸ್ಸಾಂನಿಂದ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿ ಬಾಂಗ್ಲಾದೇಶದಲ್ಲಿ ಪತ್ತೆಯಾಗಿದ್ದ ಭಾರತದ ಕಾಡಾನೆಯನ್ನು ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದು ಮಂಗಳವಾರ ಮೃತಪಟ್ಟಿದೆ.

‘ಅಸ್ಸಾಂನಲ್ಲಿ ಭೀಕರ ಪ್ರವಾಹದಲ್ಲಿ ಸಿಲುಕಿದ್ದ ಈ ಕಾಡಾನೆ  ಆಗಸ್ಟ್‌ 11 ರಂದು ಢಾಕಾದ ಜಮಾಲ್‌ಪುರ ಜಿಲ್ಲೆಯ ಕೋಯ್ರಾ ಗ್ರಾಮದಲ್ಲಿ ಪತ್ತೆಯಾಗಿತ್ತು.  ‘ಬಾಂಗ್ಲಾದ ಹೀರೊ’ (ಬಾಂಗಾಬಹಾದೂರ್‌) ಎಂದೇ ಗುರುತಿಸಿಕೊಂಡಿದ್ದ ಈ ಹೆಣ್ಣಾನೆಯನ್ನು ಉಳಿಸಿಕೊಳ್ಳಲು ಅರಣ್ಯ ಸಿಬ್ಬಂದಿ ಮತ್ತು ಕೋಯ್ರಾ ಗ್ರಾಮಸ್ಥರು ಹರಸಾಹಸ ಮಾಡಿದ್ದರು.

‘ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದಿದ್ದ ಆನೆಯನ್ನು ಸ್ಥಳೀಯರ ನೆರವಿನಿಂದ ರಕ್ಷಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ ಬಂಗಬಂಧು ಸಫಾರಿ ಪಾರ್ಕ್‌ಗೆ ಸ್ಥಳಾಂತರಿಸುವ ಸಂದರ್ಭದಲ್ಲಿ ಆನೆ ಮೃತಪಟ್ಟಿತು’ ಎಂದು ರಕ್ಷಣಾ ಕಾರ್ಯಾಚರಣೆ ಪಡೆಯ ಮುಖ್ಯಸ್ಥ ಅಶಿಮ್‌ ಮಲ್ಲಿಕ್‌ ಅವರು ಹೇಳಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

‘ಆನೆಯ ರಕ್ಷಣೆಗೆ ಸಾಕಷ್ಟು ಜನರ ನೆರವು ಪಡೆಯಲಾಗಿತ್ತು. ಉತ್ತಮ ಆಹಾರ ಮತ್ತು ಚಿಕಿತ್ಸೆಯನ್ನೂ ಕೊಡಿಸಲಾಗಿತ್ತು. ಆದರೂ ಆನೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಹೃದಯಾಘಾತ ಕಾರಣ?: ಬಳಲಿಕೆ, ನಿರ್ಜಲೀಕರಣ ಮತ್ತು ಎಲೆಕ್ಟ್ರೊಲೈಟ್‌ಗಳ ಕೊರತೆಯಿಂದ ಅತೀವವಾಗಿ ನಿತ್ರಾಣಗೊಂಡಿದ್ದರಿಂದ ಹೃದಯಾಘಾತ ಉಂಟಾಗಿದೆ ಎಂದು ಪಶುವೈದ್ಯಾಧಿಕಾರಿಗಳು ಹೇಳಿರುವುದಾಗಿ ಸ್ಥಳೀಯ ಪತ್ರಿಕೆ ವರದಿ ಮಾಡಿದೆ. 

‘ಭಾರತ ಬಯಸಿದರೆ ಆನೆಯನ್ನು ವಾಪಸ್‌ ತೆಗೆದುಕೊಂಡು ಹೋಗಬಹುದು. ಇಲ್ಲವಾದಲ್ಲಿ ನಾವೇ ಇಟ್ಟುಕೊಳ್ಳುತ್ತೇವೆ. 2004ರಲ್ಲಿ ಆನೆಯೊಂದನ್ನು ಯಶಸ್ವಿಯಾಗಿ ರಕ್ಷಿಸಿ ಭಾರತಕ್ಕೆ ಮರಳಿಸಲಾಗಿತ್ತು. 2013ರಲ್ಲಿ ಮತ್ತೊಂದು ಆನೆಯನ್ನು ಭಾರತಕ್ಕೆ ಸ್ಥಳಾಂತರಿಸುವ ಸಂದರ್ಭದಲ್ಲಿ ಮಾರ್ಗಮಧ್ಯೆಯೇ ಮೃತಪಟ್ಟಿತ್ತು’ ಎಂದು ಕಾರ್ಯಾಚರಣೆ ಸಂದರ್ಭದಲ್ಲಿ ಬಾಂಗ್ಲಾದೇಶದ ಅಧಿಕಾರಿಯೊಬ್ಬರು ತಿಳಿಸಿದ್ದರು.

ಕಾರ್ಯಾಚರಣೆ ವೇಳೆ   ತಜ್ಞರು ಹರಸಾಹಸ ಪಟ್ಟು ಅರಿವಳಿಕೆ ಮದ್ದು ನೀಡಿದರೂ ಅದು ಅಡ್ಡಾದಿಡ್ಡಿ ಚಲಿಸಿ ಪ್ರಜ್ಞೆ ಕಳೆದುಕೊಂಡು ಹಳ್ಳಕ್ಕೆ ಬಿದ್ದಿತ್ತು. ಅರಣ್ಯಾಧಿಕಾರಿಗಳು ಮತ್ತು ಗ್ರಾಮಸ್ಥರು ಅದನ್ನು ಹಳ್ಳದಿಂದ ಮೇಲಕ್ಕೆತ್ತಿದ್ದರು.

ಅತಿಯಾದ ಅರಿವಳಿಕೆ?
ಗ್ರಾಮಸ್ಥರಿಂದ ಬಾಂಗ್ಲಾದ ಹೀರೊ ಎಂದು ಕರೆಸಿಕೊಂಡಿದ್ದ ಕಾಡಾನೆಗೆ ರಕ್ಷಣಾ ಕಾರ್ಯಾಚರಣೆ ವೇಳೆ ಅತಿಯಾದ ಅರಿವಳಿಕೆ ಮದ್ದು ನೀಡಿದ್ದೇ ಸಾವಿಗೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಆಸುಪಾಸಿನ ಜನರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆನೆಗೆ  ಅಗತ್ಯ ಪ್ರಮಾಣದಲ್ಲಿ ಆಹಾರ ನೀಡಿದರೆ ಚೇತರಿಸಿಕೊಂಡು ದಾಳಿ ನಡೆಸಬಹುದು ಎಂಬ ಆತಂಕದಲ್ಲಿ ಅಧಿಕಾರಿಗಳು ಕನಿಷ್ಠ ಆಹಾರ ನೀಡಿದ್ದಾರೆ. ಹಾಗಾಗಿ ನಿಶ್ಶಕ್ತಿ ಹೆಚ್ಚಿ ಅದು ಸಾವನ್ನಪ್ಪಿದೆ ಎಂದೂ ದೂರಿದ್ದಾರೆ.

ಜುಲೈ 4ರಂದು ಬಾಂಗ್ಲಾದಲ್ಲಿ ಆನೆ ಪತ್ತೆಯಾಗುತ್ತಲೇ ಭಾರತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದ ತಜ್ಞರ ತಂಡ ಬಾಂಗ್ಲಾಕ್ಕೆ ತೆರಳಿ ಅಲ್ಲಿನ ತಂಡದೊಂದಿಗೆ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿತ್ತು. ಆದರೆ ಅದು ಮತ್ತೆ  ಕಣ್ಮರೆಯಾಗಿತ್ತು.

ಮುಖ್ಯಾಂಶಗಳು
* ಜುಲೈ 27ರಿಂದ ಆಗಸ್ಟ್‌ 11ರವರೆಗೆ ಪ್ರವಾಹದಲ್ಲಿ ಸಿಲುಕಿತ್ತು
* 1700 ಕಿ.ಮೀ. ಅಧಿಕ ದೂರ ಕೊಚ್ಚಿಹೋಗಿತ್ತು 4 ಟನ್‌ ತೂಕದ ಹೆಣ್ಣಾನೆ
* ಬ್ರಹ್ಮಪುತ್ರಾ ನದಿಯಲ್ಲಿ ಉಂಟಾಗಿದ್ದ ಭೀಕರ ಪ್ರವಾಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT