ADVERTISEMENT

ಫಿಲಿಪ್ಪೀನ್ಸ್‌ನಲ್ಲಿ ಜ್ವಾಲಾಮುಖಿ ಸ್ಫೋಟ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 16:00 IST
Last Updated 21 ಫೆಬ್ರುವರಿ 2011, 16:00 IST

ಮನಿಲಾ (ಐಎಎನ್‌ಎಸ್): ಕೇಂದ್ರ ಫಿಲಿಪ್ಪೀನ್ಸ್‌ನ ಸೊರ್ಸೊಗಾನ್‌ನಲ್ಲಿ ಸೋಮವಾರ ಬುಲುಸಾನ್ ಜ್ವಾಲಾಮುಖಿ ಭಾರಿ ಪ್ರಮಾಣದಲ್ಲಿ ಸ್ಫೋಟಿಸಿದ್ದು, ಅದರಿಂದ ಹೊರಚಿಮ್ಮಿದ ಬೂದಿ ಸುಮಾರು ಎರಡು ಕಿ.ಮೀ ಎತ್ತರದವರೆಗೆ ಹಾರಿತು ಎಂದು ಫಿಲಿಪ್ಪೀನ್ಸ್ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ಸಂಸ್ಥೆ (ಫಿಲ್ವೊಕ್ಸ್) ತಿಳಿಸಿದೆ.

ಬೆಳಿಗ್ಗೆ ಸುಮಾರು 9.15ರ ಸಮಯದಲ್ಲಿ ಕಿವಿಗಡಚಿಕ್ಕುವ ಸದ್ದಿನೊಂದಿಗೆ ಅಗ್ನಿಪರ್ವತ ಸಿಡಿಯಿತು. ಸ್ಫೋಟದ ತೀವ್ರತೆಯಿಂದ ಅದರಿಂದ ಹಾರಿದ ಹೊರಚಿಮ್ಮಿದ ಬೂದಿ ಎರಡು ಕಿ.ಮೀ.ವರೆಗೂ ಹಾರಿತು. ಸಮೀಪದ ಪಟ್ಟಣಗಳಾದ ಕ್ಯಾಸಿಗುರನ್ ಮತ್ತು ಜುಬಾನ್‌ಗಳನ್ನು ಬೂದಿ ಆವರಿಸಿದೆ. ಸುಮಾರು 1 ಸಾವಿರ ಸ್ಥಳೀಯರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಅಗ್ನಿಪರ್ವತದ ಸಮೀಪ ವಿಮಾನ ಹಾರಾಟ ನಡೆಸದಂತೆ ಪೈಲಟ್‌ಗಳಿಗೆ ಎಚ್ಚರಿಕೆ ನೀಡಲಾಗಿದೆ.

ಬುಲುಸಾನ್ ಸೊರ್ಸೊಗಾನ್‌ನಲ್ಲಿರುವ ಅತ್ಯಂತ ಎತ್ತರದ ಪರ್ವತವಾಗಿದ್ದು, ಸುಮಾರು 3,672 ಹೆಕ್ಟೇರ್‌ನಷ್ಟು ವಿಸ್ತಾರವಾಗಿದೆ. ಕಳೆದ ಡಿಸೆಂಬರ್‌ನಿಂದಲೂ ಈ ಪರ್ವತ ಬಿಸಿ ಹಬೆ ಮತ್ತು ಬೂದಿಯನ್ನು ಉಗುಳುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.