ADVERTISEMENT

ಬಟಾ ಬಯಲಾಯ್ತು ಕೋಕ ಕೋಲಾ ಸೂತ್ರ!

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 16:45 IST
Last Updated 15 ಫೆಬ್ರುವರಿ 2011, 16:45 IST

ಲಂಡನ್ (ಐಎಎನ್‌ಎಸ್): ಇನ್ನು ಕೋಕ ಕೋಲಾವನ್ನು ಜನ ಅಂಗಡಿಯಿಂದಲೇ ಕೊಂಡು ತರಬೇಕೆಂದೇನೂ ಇಲ್ಲ. ಯಾರು ಬೇಕಾದರೂ ಬೇಕೆಂದಾಗ ಬೇಕಾದಷ್ಟನ್ನು ಮನೆಯಲ್ಲೇ ತಯಾರಿಸಿಕೊಂಡು ತೃಪ್ತಿಯಾಗುವಷ್ಟು ಹೀರಬಹುದು!

ಯಾಕೆಂದರೆ ವಿಶ್ವದ ಈ ಅತ್ಯಂತ ಜನಪ್ರಿಯ ತಂಪು ಪಾನೀಯವನ್ನು ತಯಾರಿಸುವ ಬಹು ಮಹತ್ವದ ‘ಗೋಪ್ಯ ಸೂತ್ರ’ ಇದೀಗ ಬಟಾ ಬಯಲಾಗಿದೆ. ಇದರಿಂದ ಈವರೆಗೆ ಬರೀ ‘ಬ್ರಾಂಡೆಡ್’ ಆಗಿದ್ದ ಬಹುಜನರ ನೆಚ್ಚಿನ ‘ಕೋಕ್’ ಇನ್ನು ಮುಂದೆ ‘ಹೋಮ್ ಮೇಡ್’ ಸಹ ಆಗಬಹುದಾಗಿದೆ.

ಅಟ್ಲಾಂಟಾ ನಗರದಲ್ಲಿರುವ ಬೀಗ ಹಾಕಿದ ಉಕ್ಕಿನ ಕೋಣೆಯಲ್ಲಿ ಭದ್ರವಾಗಿರಿಸಿದ್ದ ಈ ಸೂತ್ರವನ್ನು 24 ಗಂಟೆಯೂ ಭದ್ರತಾ ಸಿಬ್ಬಂದಿ ಕಾವಲು ಕಾಯುತ್ತಿದ್ದರು. ಇಂತಹ ಬಿಗಿ ಭದ್ರತೆಯ ನಡುವೆ ಅದೆಷ್ಟೋ ವರ್ಷಗಳಿಂದ ಅಡಗಿ ಕುಳಿತಿದ್ದ ಮಹತ್ವದ ಗುಟ್ಟನ್ನು ವೆಬ್‌ಸೈಟೊಂದು ರಟ್ಟು ಮಾಡಿದೆ.

ಜಾನ್ ಪೆಂಬರ್ಟನ್ ಎಂಬಾತ 1886ರಲ್ಲಿ ಈ ಪೇಯವನ್ನು ಕಂಡುಹಿಡಿದಿದ್ದ. ಕೋಕ ಕೋಲಾ ತಯಾರಿಕೆಗೆ ಅಗತ್ಯವಾದ ರಹಸ್ಯ ಅಂಶ ‘ಮರ್ಚಂಡೈಸ್- 7ಎಕ್ಸ್’ ಅನ್ನು ತಯಾರಿಸಲು ಬೇಕಾದ ವಿವಿಧ ಬಗೆಯ ತೈಲಗಳನ್ನು ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎಂಬುದನ್ನು ಈ ‘ರಹಸ್ಯ ಸೂತ್ರ’ ಒಳಗೊಂಡಿತ್ತು. ಈಗ ಈ ಸೂತ್ರ americanlife.org ಎಂಬ ವೆಬ್‌ಸೈಟ್‌ನಲ್ಲಿ ಚಿತ್ರ ಸಮೇತ ಪ್ರಕಟಗೊಂಡಿರುವುದಾಗಿ ‘ಡೇಲಿ ಟೆಲಿಗ್ರಾಫ್’ ವರದಿ ಮಾಡಿದೆ.

ಇಲ್ಲಿದೆ ಭಾರಿ ರಹಸ್ಯ
ಬಹುಜನರ ನೆಚ್ಚಿನ ಕೋಲಾ ತಯಾರಿಕೆಯ ರಹಸ್ಯ ಸೂತ್ರ ಹೀಗಿದೆ:
ಮೂರು ಗುಟುಕಿನಷ್ಟು ಕೋಕ  ದ್ರವ ಪದಾರ್ಥ
ಸಿಟ್ರಿಕ್ ಆಸಿಡ್ 3 ಔನ್ಸ್
ಕೆಫೀನ್ 1 ಔನ್ಸ್
ಸಕ್ಕರೆ 30 (ಪ್ರಮಾಣದ ಲೆಕ್ಕ ಬರೆದಿರುವ ಗುರುತುಗಳು ಸ್ಪಷ್ಟವಾಗಿಲ್ಲ)
ನೀರು 2.5 ಗ್ಯಾಲನ್
ನಿಂಬೆ ದ್ರವ 40 ಔನ್ಸ್
ವೆನಿಲ್ಲಾ ಒಂದು ಔನ್ಸ್
ಕ್ಯಾರಾಮೆಲ್ 1.5 ಔನ್ಸ್ ಅಥವಾ ಬಣ್ಣಕ್ಕಾಗಿ ಇನ್ನಷ್ಟು ಸೇರಿಸಬಹುದು.
7ಎಕ್ಸ್ ಸುಗಂಧ (5 ಗ್ಯಾಲನ್ ಸಿರಪ್‌ಗೆ 2 ಔನ್ಸ್ ಸುಗಂಧ)
ಮದ್ಯ 8 ಔನ್ಸ್
ಕಿತ್ತಳೆ ತೈಲ 20 ಹನಿ
ನಿಂಬೆ ತೈಲ 30 ಹನಿ
ಜಾಯಿಕಾಯಿ ತೈಲ 10 ಹನಿ
ಕೊತ್ತಂಬರಿ ತೈಲ 5 ಹನಿ
ನೀರೋಲಿ ತೈಲ 10 ಹನಿ
ದಾಲ್ಚಿನ್ನಿ ತೈಲ 10 ಹನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.