ಔಗಾಡೌ(ಎಎಫ್‌ಪಿ): ಪಶ್ಚಿಮ ಆಫ್ರಿಕಾದ ಬರ್ಕಿನಾ ಫಾಸೊ ಔಗಾಡೌದ ಹೋಟೆಲ್ ಹಾಗೂ ರೆಸ್ಟೋರೆಂಟ್ ಮೇಲೆ ಅಲ್ ಕೈದಾ ಉಗ್ರರು ಶನಿವಾರ ನಡೆಸಿದ ದಾಳಿಯಲ್ಲಿ ಕನಿಷ್ಠ 26 ಮಂದಿ ಮೃತಪಟ್ಟಿದ್ದಾರೆ.
ಮೃತರಲ್ಲಿ 18 ದೇಶಗಳ ಪ್ರಜೆಗಳು ಸೇರಿದ್ದಾರೆ. ಹೋಟೆಲ್‌ನಲ್ಲಿದ್ದ 126 ಒತ್ತೆಯಾಳುಗಳನ್ನು ರಕ್ಷಿಸಲಾಗಿದೆ. ಇವ ರಲ್ಲಿ 33 ಮಂದಿ ಗಾಯಗೊಂಡಿದ್ದಾರೆ.
ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಉಗ್ರರು ಮುಸುಕುಧರಿಸಿ ದಾಳಿ ಮಾಡಿದ್ದರು.
ಹೋಟೆಲ್‌ನಲ್ಲಿ ಉಗ್ರರ ವಿರುದ್ಧ ಆರಂಭಿಸಿದ್ದ ಕಾರ್ಯಾಚರಣೆ ಮುಕ್ತಾಯವಾಗಿದೆ ಎಂದು ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.
ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರು ಬಲಿಯಾಗಿದ್ದಾರೆ. ಇವರಲ್ಲಿ ಇಬ್ಬರು ಅರಬ್ ಮತ್ತು ಒಬ್ಬ ಆಫ್ರಿಕನ್ ಪ್ರಜೆ. ಮೃತ ನಾಲ್ವರು ಉಗ್ರರಲ್ಲಿ ಇಬ್ಬರು ಮಹಿಳೆ ಯರೂ ಸೇರಿದ್ದಾರೆ. ಐದನೇ ಉಗ್ರ ತಪ್ಪಿಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಸಲಾಗುತ್ತಿದೆ.
ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪವೇ ಇರುವ ನಾಲ್ಕು ಮಹಡಿಯ ಈ ಹೋಟೆಲ್‌ಗೆ ಹಲವು ದೇಶದ ಪ್ರಜೆಗಳು ಹಾಗೂ ವಿಶ್ವಸಂಸ್ಥೆಯ ಸಿಬ್ಬಂದಿ ಬರುತ್ತಿದ್ದರು.
‘ಭದ್ರತಾ ಪಡೆಗಳು ಹೋಟೆಲ್‌ನ 147 ಕೊಠಡಿಗಳನ್ನು ವಶಕ್ಕೆ ಪಡೆದಿವೆ’ ಎಂದು ಒಳಾಡಳಿತ ಸಚಿವ ಸೈಮನ್ ಕಾಂಪೋರೆ ಹೇಳಿದ್ದಾರೆ.
ದಾಳಿಯ ಹೊಣೆ ಹೊತ್ತುಕೊಂಡಿರುವ ಅಲ್‌ಕೈದಾ, ಇದು ದಾಳಿ ಫ್ರಾನ್ಸ್ ವಿರುದ್ಧದ ಪ್ರತೀಕಾರ ಎಂದು ಹೇಳಿಕೊಂಡಿದೆ.
ದಾಳಿಕೋರರು ಮಾಲಿ ಮೂಲದ ಅಲ್ ಮುರಾಬಿತೂನ್ ಗುಂಪಿನ ಸದಸ್ಯರಾಗಿದ್ದು, ಮೊಖ್ತರ್ ಬೆಲ್ ಮೊಖ್ತರ್ ಎಂಬಾತ ಇದರ ನಾಯಕನಾಗಿದ್ದಾನೆ.
ರೆಸ್ಟೋರೆಂಟ್‌ನ ಟೆರೇಸ್ ಮೇಲೆ 10 ಮೃತದೇಹಗಳನ್ನು ಅಗ್ನಿಶಾಮಕ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ.
ಬೆಂಕಿ ಹೊತ್ತಿಕೊಂಡಿತ್ತು: ಶನಿವಾರ ಮುಂಜಾನೆ ಹೋಟೆಲ್ ಪ್ರವೇಶ ದ್ವಾರ ದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ರಸ್ತೆಯಲ್ಲಿದ್ದ 10 ವಾಹನಗಳು ಬೆಂಕಿಗೆ ಆಹುತಿಯಾಗಿದ್ದವು.
ರೆಸ್ಟೋರೆಂಟ್‌ನಲ್ಲಿ ಕಾರ್ಯಾಚರಣೆ: ನಾಲ್ಕು ಮಹಡಿಯ ಹೋಟೆಲ್‌ನಲ್ಲಿ ಉಗ್ರದ ದಮನದ ಕಾರ್ಯಾಚರಣೆ ಮುಕ್ತಾಯವಾಗಿದ್ದರೂ ಪಕ್ಕದ ಕ್ಯಾಪುಚಿನೊ ರೆಸ್ಟೋರೆಂಟ್‌ನಲ್ಲಿ ಉಗ್ರರು ಸೇರಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.