
ಢಾಕಾ (ಪಿಟಿಐ): ಬಾಂಗ್ಲಾದೇಶದ ಮಾಜಿ ಪ್ರಧಾನಿಯೂ ಆಗಿರುವ ವಿರೋಧ ಪಕ್ಷದ ನಾಯಕಿ ಖಲೀದಾ ಜಿಯಾ (70) ಅವರ ವಿರುದ್ಧ ಸೋಮವಾರ ದೇಶದ್ರೋಹ ಪ್ರಕರಣ ದಾಖಲಾಗಿದೆ.
ಬಾಂಗ್ಲಾದೇಶ ವಿಮೋಚನಾ ಚಳವಳಿಯ ಹುತಾತ್ಮರ ಬಗ್ಗೆ ಮಾನಹಾನಿಕಾರಕ ಹೇಳಿಕೆ ನೀಡಿದ ಆರೋಪದಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಗೃಹ ಸಚಿವಾಲಯವು ಖಲೀದಾ ಅವರ ವಿರುದ್ಧ ದೇಶದ್ರೋಹ ಮೊಕದ್ದಮೆ ದಾಖಲಿಸಲು ಅನುಮತಿ ನೀಡಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.
‘ಢಾಕಾದ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಅವರ ಸಮ್ಮುಖದಲ್ಲಿ ಖಲೀದಾ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರ ಬಂಧನಕ್ಕೆ ಕ್ರಮ ಕೈಗೊಳ್ಳುವಂತೆಯೂ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ’ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಜಿಯಾ ಅವರ ಬಿಎನ್‌ಪಿ ಪಕ್ಷವು ಮೂಲಭೂತವಾದಿ ಜಮಾತೇ ಇಸ್ಲಾಮಿಯ ಪ್ರಮುಖ ಅಂಗಪಕ್ಷವಾಗಿದೆ. ಇಸ್ಲಾಮಿ ಪಕ್ಷವು ಪಾಕಿಸ್ತಾನದ ವಿರುದ್ಧ ನಡೆದಿದ್ದ ಬಾಂಗ್ಲಾದೇಶದ ವಿಮೋಚನಾ ಚಳವಳಿಗೆ ತೀವ್ರ ವಿರೋಧವನ್ನೂ ವ್ಯಕ್ತಪಡಿಸಿತ್ತು.
ಬಾಂಗ್ಲಾದೇಶ ದಂಡಸಂಹಿತೆಯ 123 (ಎ) ಕಲಂ ಅಡಿಯಲ್ಲಿ ಖಲೀದಾ ಅವರ ವಿರುದ್ಧ ದೇಶದ್ರೋಹ ಪ್ರಕರಣದ ದಾಖಲಿಸಿ ವಿಚಾರಣೆ ನಡೆಸಲು ಅನುಮತಿ ಕೋರಿ ಸುಪ್ರೀಂ ಕೋರ್ಟ್ ವಕೀಲರಾದ ಮಮ್ತಾಜ್ ಉದ್ದೀನ್ ಅಹ್ಮದ್ ಮೆಹೆದಿ ಅವರು ಡಿಸೆಂಬರ್ 27ರಂದು ಅರ್ಜಿ ಸಲ್ಲಿಸಿದ್ದರು.
ದಂಡಸಂಹಿತೆ 123 (ಎ) ಅಡಿ ಬಂಧನಕ್ಕೊಳಗಾದ ವ್ಯಕ್ತಿಗೆ 10 ವರ್ಷಗಳವರೆಗೂ ವಿಸ್ತರಿಸಬಹುದಾದ ಕಠಿಣ ಶಿಕ್ಷೆ ವಿಧಿಸಲು ಅವಕಾಶವಿದೆ.
ಪಾಕ್ ಏಜೆಂಟ್–ಟೀಕೆ: ಖಲೀದಾ ಅವರ ವಿವಾದಾತ್ಮಕ ಹೇಳಿಕೆಯ ಬಗ್ಗೆ ಬಾಂಗ್ಲಾದೇಶದಲ್ಲಿ ವ್ಯಾಪಕ ಟೀಕೆ ಮತ್ತು ಖಂಡನೆ ವ್ಯಕ್ತವಾಗಿತ್ತು. ಆಡಳಿತಾರೂಢ ಅವಾಮಿ ಲೀಗ್, ‘ಜಿಯಾ ಅವರು ಪಾಕಿಸ್ತಾನದ ಏಜೆಂಟ್’ ಎಂದು ಟೀಕಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.