ADVERTISEMENT

ಬಾಂಗ್ಲಾ ಜತೆಗಿನ ಎಲ್ಲ ದ್ವಿಪಕ್ಷೀಯ ಕಲಹ ಬಗೆಹರಿಸಲು ಭಾರತ ಬದ್ಧ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2012, 19:30 IST
Last Updated 18 ಮಾರ್ಚ್ 2012, 19:30 IST

ಢಾಕಾ (ಪಿಟಿಐ): ಭಾರತವು ಬಾಂಗ್ಲಾದೇಶದ ಜತೆಗಿನ ಬಾಂಧವ್ಯವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಎಲ್ಲ ದ್ವಿಪಕ್ಷೀಯ ವಿಷಯಗಳನ್ನು ಚರ್ಚಿಸಲು ಬಯಸಿದೆ.

ಬಾಂಗ್ಲಾಕ್ಕೆ ಭಾರತದ ನೂತನ ರಾಯಭಾರಿಯಾಗಿ ನೇಮಕವಾಗಿರುವ ಪಂಕಜ್ ಶರಣ್ ಅವರು ಶನಿವಾರ ಇಲ್ಲಿ ಬಾಂಗ್ಲಾ ವಿದೇಶಾಂಗ ಸಚಿವೆ ದೀಪು ಮೋನಿ ಅವರನ್ನು ಭೇಟಿಯಾಗಿ ಸಮಾಲೋಚಿಸಿದ ಸಂದರ್ಭದಲ್ಲಿ ಈ ಭರವಸೆ ನೀಡಿದರು.

`ಉಭಯ ದೇಶಗಳ ಬಾಂಧವ್ಯದ ಮೇಲೆ ಪರಿಣಾಮ ಬೀರುವ ಎಲ್ಲ ದ್ವಿಪಕ್ಷೀಯ ಸಮಸ್ಯೆಗಳನ್ನು ಬಗೆಹರಿಸಲು ಬಾಂಗ್ಲಾದೊಡನೆ ಸ್ಪಂದಿಸಿ ಕಾರ್ಯನಿರ್ವಹಿಸಲು ಭಾರತ ಕಟಿಬದ್ಧವಾಗಿದೆ~ ಎಂದು ಅವರು ತಿಳಿಸಿದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೀಪು ಮೋನಿ ಅವರೊಡನೆ ಆರೋಗ್ಯಪೂರ್ಣ ಮತ್ತು ರಚನಾತ್ಮಕ ಮಾತುಕತೆ ನಡೆಸಿರುವುದಾಗಿ ಹೇಳಿದರು. ಅಲ್ಲದೆ, ಬಾಂಗ್ಲಾದೊಡನೆ ದ್ವಿಪಕ್ಷೀಯ ವಿಷಯಗಳ ಚರ್ಚೆ ಮುಂದುವರಿಸಲು ಭಾರತ ಉತ್ಸುಕವಾಗಿರುವುದಾಗಿಯೂ ಸ್ಪಷ್ಟಪಡಿಸಿದರು.

ಸಾಗರದಲ್ಲಿ ಎರಡೂ ದೇಶಗಳಿಗೆ ಹಾನಿಕಾರಕವಾದ ಯಾವುದೇ ಸಮಸ್ಯೆಯನ್ನು ಒಗ್ಗೂಡಿ ಎದುರಿಸಲು ಉಭಯ ಸರ್ಕಾರಗಳು ಇಚ್ಛಿಸಿವೆ ಎಂದು ಅವರು ನುಡಿದರು.

ಬಂಗಾಳ ಕೊಲ್ಲಿಯಲ್ಲಿ ಬಾಂಗ್ಲಾ ಮತ್ತು ಮ್ಯಾನ್ಮಾರ್ ಮಧ್ಯೆ ಉಂಟಾದ ಕಡಲ ಕಲಹದಲ್ಲಿ ವಿಶ್ವಸಂಸ್ಥೆಯ ನ್ಯಾಯಮಂಡಳಿ ನೀಡಿದ ತೀರ್ಪಿಗೆ ಪ್ರತಿಕ್ರಿಯೆಯಾಗಿ ಅವರು ಮೇಲಿನಂತೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.