ADVERTISEMENT

ಬಾಟಲಿ ನೀರು ಒಯ್ಯಿರಿ, ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿರಿ !

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2012, 6:35 IST
Last Updated 19 ಏಪ್ರಿಲ್ 2012, 6:35 IST

ಲಂಡನ್ (ಪಿಟಿಐ): ಹಗಲು ರಾತ್ರಿ ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಓದುವವರೇ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸೋಕೆ ಕಷ್ಟಪಡ್ತಾರೆ, ನೀವು ನೋಡಿದ್ರೆ ಬಾಟಲಿ ನೀರಿನಿಂದ ಪರೀಕ್ಷೆಯಲ್ಲಿ ಹೆಚ್ಚು ಅಂಕ ಬರುತ್ತೆ ಅಂತಿರಲ್ಲಾ ಎಂದು ಮೂಗುಮುರಿಯಬೇಡಿ. ಇದು ಸತ್ಯ ಎನ್ನುತ್ತಾರೆ ವೆಸ್ಟ್‌ಮಿನಿಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರು.

ನೀವು ಪರೀಕ್ಷೆ ಬರೆಯುವವರಾದರೆ ಒಂದು ಬಾಟಲಿ ನೀರಿನೊಂದಿಗೆ ಪರೀಕ್ಷಾ ಕೊಠಡಿಗೆ ಹೋಗಿ, ಅದು ನಿಮ್ಮ  ಅಂಕ ಹೆಚ್ಚಿಸಲು ಸಹಾಯಮಾಡುತ್ತದೆ ಎನ್ನುತ್ತಾರೆ ಸಂಶೋಧನೆ ನಡೆಸಿರುವ ವಿಜ್ಞಾನಿಗಳು.

ಪರೀಕ್ಷಾ ಕೊಠಡಿಗೆ ಯಾವುದಾದರೂ ಪಾನೀಯ ತೆಗೆದುಕೊಂಡು ಹೋಗಿ ಎಂದು ಸಲಹೆ ನೀಡುವ ಸಂಶೋಧಕರು ವಿಶೇಷವಾಗಿ ನೀರು ಕೊಂಡ್ಯೊಯ್ದರೆ ನೀರು ತರದವರಿಗಿಂತ ನೀವು ಶೇಕಡಾ 10ರಷ್ಟು ಚೆನ್ನಾಗಿ ಪರೀಕ್ಷೆ ಎದುರಿಸುತ್ತಿರಿ ಎನ್ನುತ್ತಾರೆ.

ಆದಾಗ್ಯೂ, ನೀರು ತೆಗೆದುಕೊಂಡು ಹೋಗುವುದರಿಂದಾನೇ ಏಕೆ ಪರೀಕ್ಷೆ ಎದುರಿಸುವ ಸಾಮರ್ಥ್ಯ ಹೆಚ್ಚುತ್ತೆ ಎನ್ನುವ ಕಂಗಟ್ಟನ್ನು ಈ ಸಂಶೋಧಕರಿಗೆ ಈವರೆಗೆ ಬಿಡಿಸಲು ಆಗಿಲ್ಲ. ಆದರೆ ಮನಶಾಸ್ತ್ರಜ್ಞರು ಹೇಳುವ ಪ್ರಕಾರ `ನೀರಿನಲ್ಲಿರುವ ಹೈಡ್ರೇಟ್ ಅಂಶವು ಮೆದುಳನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ. ಜತೆಗೆ ಕೊಂಡ್ಯೊಯ್ದಿರುವ ನೀರು ನಿಮ್ಮ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸುತ್ತದೆ~ ಎಂದು ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ.

ನೂರಾರು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ತಮ್ಮ ಸಂಶೋಧನೆಗೆ ಆಯ್ಕೆ ಮಾಡಿಕೊಂಡು ಅವರ  ಪ್ರಥಮ ಹಾಗೂ ದ್ವಿತೀಯ ವರ್ಷ ಪದವಿ ಪರೀಕ್ಷೆಗಳ ಸಮಯದಲ್ಲಿ ಈ ಅಂಶ ಕುರಿತಾಗಿ ಸಂಶೋಧನೆ ನಡೆಸಲಾಯಿತು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ನೀವು ಪರೀಕ್ಷೆ ಎದುರಿಸುತ್ತಿರುವವರಾದರೆ ಇದನ್ನು ಪ್ರಯೋಗ ಮಾಡಿ ನೋಡಿ, ಜತೆಗೆ ಹೆಚ್ಚು ಅಂಕ ಪಡೆದು ಖುಷಿಯಾಗಿರಿ ಎನ್ನುತ್ತಾರೆ ಸಂಶೋಧಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.