
ಮಾಸ್ಕೊ (ಎಎಫ್‌ಪಿ): ರಷ್ಯಾ, ಜರ್ಮನಿ ಮತ್ತು ಅಮೆರಿಕದ ಗಗನಯಾತ್ರಿಗಳನ್ನು ಒಳಗೊಂಡ ಬಾಹ್ಯಾಕಾಶ ನೌಕೆಯು ಗುರುವಾರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ಐಎಸ್‌ಎಸ್) ಯಶಸ್ವಿಯಾಗಿ ಸೇರಿದೆ.
‘ಭಾರತದ ಕಾಲಮಾನದ ಪ್ರಕಾರ ಗುರುವಾರ ಬೆಳಿಗ್ಗೆ 7.14ಕ್ಕೆ ಮಾನವಸಹಿತ ಸೊಯೆಜ್ ಟಿಎಂಎ13ಎಂ ಬಾಹ್ಯಾಕಾಶ ನೌಕೆಯನ್ನು ಐಎಸ್‌ಎಸ್‌ಗೆ ಕಳುಹಿಸಲಾಗಿದೆ’ ಎಂದು ರಷ್ಯಾ ಬಾಹ್ಯಾಕಾಶ ಸಂಸ್ಥೆ ರೊಸ್‌ಕೊಸ್‌ಮಸ್ ತಿಳಿಸಿದೆ.
‘ಗಗನಯಾತ್ರಿಗಳಾದ ರಷ್ಯಾದ ಮ್ಯಾಕ್ಸಿಮ್ ಸುರಾಯೆವ್, ನಾಸಾದ ರೀಡ್ ವೈಸ್‌ಮ್ಯಾನ್ ಮತ್ತು ಯುರೋಪ್ ಬಾಹ್ಯಾಕಾಶ ಸಂಸ್ಥೆಯ ಜರ್ಮನಿ ಮೂಲದ ಅಲೆಕ್ಸಾಂಡರ್ ಗೆರ್ಸ್ಟ್ ಅವರು ಐಎಸ್‌ಎಸ್ ತಲುಪಿದ ಎರಡು ಗಂಟೆ ಬಳಿಕ ಅದರ ಒಳ ಪ್ರವೇಶಿಸಿದರು. ಅವರನ್ನು ಐಎಸ್‌ಎಸ್‌ನಲ್ಲಿದ್ದ ಅಮೆರಿಕದ ಸ್ಟೀವ್ ಸ್ವ್ಯಾನ್‌ಸನ್, ರಷ್ಯಾದ ಅಲೆಕ್ಸಾಂಡರ್ ಸ್ಕೊರ್ವತ್ಸೊವ್ ಮತ್ತು ಒಲೆಗ್ ಅರ್ತೆಮ್‌ಯೆವ್ ಬರಮಾಡಿಕೊಂಡರು’ ಎಂದು ರಷ್ಯಾ ನಿಯಂತ್ರಣ ಕೇಂದ್ರ ಹೇಳಿದೆ.
ಇದಕ್ಕೂ ಮುನ್ನ ಸೊಯೆಜ್ ನೌಕೆಯನ್ನು ಕಜಕ್‌ಸ್ತಾನದ ಬೈಕನೂರ್‌ನಲ್ಲಿರುವ ರಷ್ಯಾದ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯರಾತ್ರಿ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.