ADVERTISEMENT

ಬ್ಯಾಂಕಾಕ್ ದಾಳಿಯ ಹಿಂದೆ ಇರಾನ್ ಕೈವಾಡ?

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 9:45 IST
Last Updated 15 ಫೆಬ್ರುವರಿ 2012, 9:45 IST

ಬ್ಯಾಂಕಾಕ್: ಭಾರತ ಹಾಗೂ ಜಾರ್ಜಿಯಾದಲ್ಲಿ ಇಸ್ರೇಲಿ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಸಂಘಟನೆಯೇ ಬ್ಯಾಂಕಾಕ್ನಲ್ಲಿ ನಡೆದ ಬಾಂಬ್ ದಾಳಿಯ ಹಿಂದಿರುವ ಸಾಧ್ಯತೆ ಕುರಿತು ಥಾಯ್ ತನಿಖಾ ತಂಡ ತನಿಖೆ ನಡೆಸುತ್ತಿದೆ ಎಂದು ಬುಧವಾರ ಹಿರಿಯ ಭದ್ರತಾ ಅಧಿಕಾರಿ ತಿಳಿಸಿದ್ದಾರೆ.

ಮಂಗಳವಾರ ಬ್ಯಾಂಕಾಕ್ನ ಬಾಡಿಗೆಯ ಮನೆಯಲ್ಲಿದ್ದ ಇರಾನ್ ಪಾಸ್ಪೋರ್ಟ್ ಹೊಂದಿದ್ದ ವ್ಯಕ್ತಿಯೊಬ್ಬ ತೀವ್ರವಾಗಿ ಗಾಯಗೊಂಡಿದ್ದ. ಆತನ ಮನೆಯನ್ನು ಶೋಧಿಸಿದಾಗ ಮತ್ತಷ್ಟು ಸ್ಪೋಟಕಗಳು ಪತ್ತೆಯಾಗಿದ್ದವು.

ಭಾರತ ಹಾಗೂ ಜಾರ್ಜಿಯಾದಲ್ಲಿ ಬಾಂಬ್ ದಾಳಿ ನಡೆದ ಮರು ದಿನವೇ ಬ್ಯಾಂಕಾಕ್ ನಲ್ಲಿ ಮೂರು ಬಾಂಬ್ ಸ್ಫೋಟವಾಗಿದೆ. ಈ ದಾಳಿಯ ಹಿಂದೆ ಇರಾನ್ ಹಾಗೂ ಹಜ್ಬೋಲಾ ಸಂಘಟನೆಯ ಕೈವಾಡ ಇರಬಹುದು ಎಂದು ಇಸ್ರೇಲ್ ಆರೋಪಿಸಿದೆ. ಇಸ್ರೇಲ್ ಆರೋಪವನ್ನು ಇರಾನ್ ತಳ್ಳಿಹಾಕಿದೆ.

ADVERTISEMENT

ದೆಹಲಿಯಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಹಾಗೂ ಜಾರ್ಜಿಯಾದಲ್ಲಿ ವಿಫಲಗೊಳಿಸಿದ ಬಾಂಬ್ ದಾಳಿಯಲ್ಲಿ ಬಳಸಿದ ತಂತ್ರಜ್ಞಾನವನ್ನೇ ಬ್ಯಾಂಕಾಕ್ ದಾಳಿಯಲ್ಲೂ ಬಳಸಲಾಗಿದೆ ಎಂದು ಥಾಯ್ ಭದ್ರತಾ ಅಧಿಕಾರಿಗಳು ಸ್ಫಷ್ಟಪಡಿಸಿದ್ದಾರೆ.

ಈ ಬಾಂಬ್ ಸ್ಫೋಟದಲ್ಲಿ ಸೈಯದ್ ಮೊರಾದಿ ಎಂಬ ವ್ಯಕ್ತಿ ತನ್ನ ಒಂದು ಕಾಲು ಕಳೆದುಕೊಂಡಿದ್ದು, ಮತ್ತೊಂದು ಕಾಲು ತೀವ್ರವಾಗಿ ಗಾಯಗೊಂಡಿದೆ. ಈತ ಬಾಡಿಗೆಗೆ ಇದ್ದ ಮನೆಯಲ್ಲಿ ಇನ್ನಿಬ್ಬರು ವ್ಯಕ್ತಿಗಳು ಇದ್ದರು ಎಂಬುದು ತನಿಖಾ ತಂಡ ಪತ್ತೆ ಹಚ್ಚಿದೆ. ಇವರಿಬ್ಬರಲ್ಲಿ ಒಬ್ಬನನ್ನು ಬ್ಯಾಂಕಾಕ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆದರೆ ಮೂರನೇ ವ್ಯಕ್ತಿ ಬಂಧಿಸುವುದರಳೊಗಾಗಿ ಆತ ಭದ್ರತಾ ತಪಾಸಣೆ ಮುಗಿಸಿ ವಿಮಾನದ ಮೂಲಕ ಮಲೇಷ್ಯಾಕ್ಕೆ ಪ್ರಯಾಣಿಸಿರುವುದಾಗಿ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.