ಸಾವೊಪೊಲೊ (ಎಪಿ): ರಾಜಕೀಯ ಭ್ರಷ್ಟಾಚಾರ ನಿರ್ಮೂಲನೆಗೆ ಆಗ್ರಹಿಸಿ ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ಚಳವಳಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಎರಡೂವರೆ ಲಕ್ಷ ಮಂದಿ ಭಾನುವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಜನರು, ರಾಜಕೀಯ ವ್ಯವಸ್ಥೆಯನ್ನು ಸುಧಾರಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳದ ಹೊರತೂ ಚಳವಳಿ ಕೈಬಿಡುವುದಿಲ್ಲ ಎಂದು ಘೋಷಿಸಿದರು. ಭ್ರಷ್ಟ ರಾಜಕಾರಣಿಗಳನ್ನು ಜೈಲುಪಾಲು ಮಾಡದಿರುವ ಉದ್ದೇಶದಿಂದ ರೂಪಿಸಲಾದ ಹಾಗೂ ಅಪರಾಧ ಪ್ರಕರಣಗಳ ತನಿಖೆಗೆ ಮಿತಿ ಹಾಕುವ `ಪಿಇಸಿ 37' ಎಂಬ ಕಾನೂನನ್ನು ಕೈಬಿಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕಳೆದ ವರ್ಷ 24 ಜನರಿಗೆ ದಂಡನೆ ವಿಧಿಸಿದ ಬಳಿಕ, ಭ್ರಷ್ಟಾಚಾರದ ವಿರುದ್ಧ ಜನಾಂದೋಲನ ಶುರುವಾಗಿದೆ. ಶಿಕ್ಷೆಗೆ ಗುರಿಯಾಗಿದ್ದವರು ಸಲ್ಲಿಸಿದ ಮೇಲ್ಮನವಿಯಿಂದಾಗಿ ಇನ್ನೂ ಅವರಿಗೆ ಶಿಕ್ಷೆ ಜಾರಿಯಾಗಿಲ್ಲ. ಇದು ಬ್ರೆಜಿಲ್ ನಿವಾಸಿಗಳನ್ನು ಕೆರಳಿಸಿದೆ.
ಈ ಮಧ್ಯೆ ಶನಿವಾರ ರಾತ್ರಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದಿಲ್ಮಾ ರೌಸೆಫ್, ಶಾಂತಿಯುತ ಪ್ರತಿಭಟನೆಗೆ ಸರ್ಕಾರ ಅಡ್ಡಿಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದಲ್ಲದೇ ತಮ್ಮ ಸರ್ಕಾರ ಯಾವತ್ತಿಗೂ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದರು.
`ಭ್ರಷ್ಟಾಚಾರ ನಿರ್ಮೂಲನೆ ಕುರಿತಂತೆ ಜನರ ಆಶಯವನ್ನು ದಿಲ್ಮಾ ಅವರು ಸರಿಯಾಗಿ ಅರ್ಥೈಸಿಕೊಳ್ಳುತ್ತಿಲ್ಲ. ಅವರು ಬರೀ ಮಾತನಾಡಿದರಷ್ಟೇ ಹೊರತೂ ಮತ್ತೇನೂ ಹೇಳಲಿಲ್ಲ' ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವೈದ್ಯಕೀಯ ವಿದ್ಯಾರ್ಥಿ ಮಯೂರ ಫರ್ನಾಂಡಿಸ್ ಅಸಮಾಧಾನ ವ್ಯಕ್ತಪಡಿಸಿದರು.
ಬ್ರೆಜಿಲ್‌ನ ನೂರಕ್ಕೂ ಹೆಚ್ಚು ನಗರಗಳಲ್ಲಿ ಸಾವಿರಾರು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಲೊ ಹಾರಿಜಾಂಟ್ ನಗರದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರೆ, ಸಾಲ್ವಡರ್‌ನಲ್ಲಿ ಸಹ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ ಘಟನೆ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.