ADVERTISEMENT

ಭಾರತಕ್ಕೆ ಪಾಠ ಕಲಿಸಲು ಕಾಶ್ಮೀರಕ್ಕೆ ಪಾಕ್ ಸೇನೆ ಕಳಿಸಿ: ಹಫೀಜ್ ಸಯೀದ್

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2016, 9:41 IST
Last Updated 16 ಆಗಸ್ಟ್ 2016, 9:41 IST
ಹಫೀಜ್ ಸಯೀದ್
ಹಫೀಜ್ ಸಯೀದ್   

ಇಸ್ಲಾಮಾಬಾದ್ :ಹಿಜಾಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯ ನಂತರ ಕಾಶ್ಮೀರ ಕಣಿವೆಯಲ್ಲಿ ಭುಗಿಲೆದ್ದ ಹಿಂಸಾಚಾರ ಇನ್ನೂ ಮುಗಿದಿಲ್ಲ. ಕಳೆದ ಒಂದು ತಿಂಗಳಿನಿಂದ ಕಾಶ್ಮೀರದಲ್ಲಿ  ಹಿಂಸಾಚಾರ  ಮುಂದುವರೆದಿದ್ದು, ಇಲ್ಲಿಯವರೆಗೆ 63 ಮಂದಿ ಸಾವಿಗೀಡಾಗಿದ್ದಾರೆ. ಇಲ್ಲಿ ನಡೆದ ಪ್ರತಿಭಟನೆಗಳಲ್ಲಿ ಸಾವಿರ ಮಂದಿಗೆ ಗಾಯಗಳಾಗಿವೆ. ಇಂತಿರುವಾಗ ಭಾರತಕ್ಕೆ ತಕ್ಕ ಪಾಠ ಕಲಿಸಲು ಕಾಶ್ಮೀರಕ್ಕೆ ಪಾಕಿಸ್ತಾನದಿಂದ ಸೇನೆಯನ್ನು ಕಳುಹಿಸಿ ಎಂದು ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಸಯೀದ್ ಹೇಳಿದ್ದಾರೆ.

ಪಾಕಿಸ್ತಾನದ ಮಾಧ್ಯಮಗಳ ವರದಿ ಪ್ರಕಾರ 26/11 ದಾಳಿಯ ರೂವಾರಿ ಸಯೀದ್, ಪಾಕ್ ಸೇನಾಧಿಕಾರಿ ಜನರಲ್ ರಹೀಲ್ ಶರೀಫ್ ಅವರಲ್ಲಿ ಈ ರೀತಿಯ ಬೇಡಿಕೆಯನ್ನೊಡ್ಡಿದ್ದಾನೆ ಎನ್ನಲಾಗುತ್ತಿದೆ.

ಕಾಶ್ಮೀರದಲ್ಲಿನ ಪ್ರತಿಭಟನೆಯನ್ನು ಭಾರತ ಹತ್ತಿಕ್ಕಲು ಪ್ರಯತ್ನಿಸಿದರೆ ಅದರ ಪರಿಣಾಮ ಗಂಭೀರವಾಗಿರುತ್ತದೆ ಎಂದು ಸಯೀದ್ ಕಳೆದ ತಿಂಗಳು ಎಚ್ಚರಿಕೆ ನೀಡಿದ್ದರು.

ಮಂಗಳವಾರ ಲಾಹೋರ್ ನಲ್ಲಿ ಮಾತನಾಡಿದ ಸಯೀದ್, ಈ ಬಾರಿ ಕಾಶ್ಮೀರದ ಜನರು ಬೀದಿಗಿಳಿದಿದ್ದಾರೆ. ಪ್ರತಿಭಟನೆಗಳು ಜನಾಂದೋಲನವಾಗಿ ಮಾರ್ಪಟ್ಟಿವೆ. ಕಾಶ್ಮೀರದಲ್ಲಿರುವ ಸಂಘಟನೆಗಳೆಲ್ಲ ಒಂದಾಗಿವೆ. ಹುರಿಯತ್‍ನ ಎಲ್ಲ ವಿಭಾಗಗಳು ಒಗ್ಗಟ್ಟಾಗಿ ನಿಂತಿವೆ. ಮುತ್ತಹಿದಾ ಜಿಹಾದ್ ಕೌನ್ಸಿಲ್ ನ ಎಲ್ಲ ಸಂಘಟನೆಗಳು ಒಟ್ಟಾಗಿ ಬಂದು ಸೇರಿವೆ. ಕಾಶ್ಮೀರದಲ್ಲಿ ಸಾವಿಗೀಡಾದ ಜೀವದ ಬೆಲೆ ವ್ಯರ್ಥವಾಗುವುದಿಲ್ಲ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.