ವಾಷಿಂಗ್ಟನ್ (ಪಿಟಿಐ): ಕೇರಳ ಮೂಲದ ಭಾರತೀಯ ಅಮೆರಿಕ ಪ್ರಜೆ ಅರುಣ್ ಎಂ. ಕುಮಾರ ಅವರನ್ನು ಅಮೆರಿಕ ಸಂಸತ್ ಪ್ರಮುಖ ಆಡಳಿತ ಹುದ್ದೆಗೆ ನೇಮಕ ಮಾಡಿದೆ.
ಅಮೆರಿಕದ ಅಂತರರಾಷ್ಟ್ರೀಯ ವ್ಯಾಪಾರ ಆಡಳಿತ ಕಚೇರಿಯಲ್ಲಿ ಸಹಾಯಕ ವಾಣಿಜ್ಯ ಕಾರ್ಯದರ್ಶಿ ಮತ್ತು ಮಹಾ ನಿರ್ದೇಶಕರಾಗಿ ಅವರನ್ನು ನೇಮಿಸಲಾಗಿದೆ. ಈ ಹುದ್ದೆಯಂತೆ ಅವರು ವಿದೇಶ ವ್ಯಾಪಾರದ ಜವಾಬ್ದಾರಿ ನೋಡಿಕೊಳ್ಳಬೇಕಾಗಿದೆ.
ಕೇರಳ ವಿಶ್ವವಿದ್ಯಾಲಯದಿಂದ ಭೌತ ವಿಜ್ಞಾನ ಪದವಿ ಪಡೆದು, ನಂತರ ಮೆಸಾಚುಸೆಟ್ಸ್ ತಾಂತ್ರಿಕ ವಿವಿಯಲ್ಲಿ ಆಡಳಿತ ವ್ಯವಹಾರಗಳ ವಿಷಯದಲ್ಲಿ ಅವರು ಉನ್ನತ ಪದವಿ ಪಡೆದಿದ್ದಾರೆ.
ಲಾಡೆನ್ ಅಳಿಯನ ವಿರುದ್ಧ ಸಾಕ್ಷಾಧಾರ
ನ್ಯೂಯಾರ್ಕ್ (ಎಪಿ): ಅಲ್‌ಖೈದಾ ಸಂಘಟನೆಯ ವಕ್ತಾರ ಮತ್ತು ಒಸಾಮ ಬಿನ್ ಲಾಡೆನ್ ಅಳಿಯ ಅಬು ಗೈತ್, ಅಮೆರಿಕ ಪ್ರಜೆಗಳನ್ನು ಕೊಲ್ಲಲು ಸಂಚು ನಡೆಸಿದ್ದ ಬಗ್ಗೆ ಸಾಕಷ್ಟು ಸಾಕ್ಷಾಧಾರಗಳು ಇರುವುದರಿಂದ ಆತನ ವಿರುದ್ಧದ ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಜಿಲ್ಲಾ ನ್ಯಾಯಾಧೀಶ ಲೆವಿಸ್ ಕಪ್ಲಾನ್ ತಿಳಿಸಿದ್ದಾರೆ.
ನೈಜೀರಿಯ: ಘರ್ಷಣೆಗೆ 200 ಬಲಿ
ಅಬುಜಾ (ಐಎಎನ್‌ಎಸ್): ಬಂಡುಕೋರರು ಹಾಗೂ ಸೇನಾ ಸಿಬ್ಬಂದಿಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ 212 ಜನರು ಮೃತಪಟ್ಟ ಘಟನೆ ನೈಜೀರಿಯದಲ್ಲಿ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಘಟನೆ ಹಿಂದೆ ‘ಬೋಕೊ ಹರಾಮ್’ ಎಂಬ ಜಿಹಾದಿ ಗುಂಪಿನ ಕೈವಾಡ ಇದೆ ಎಂದು ಶಂಕಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.