ADVERTISEMENT

ಭಾರತ, ಚೀನಾ ವಿರುದ್ಧ ಟ್ರಂಪ್‌ ಟೀಕೆ

ಪಿಟಿಐ
Published 24 ಫೆಬ್ರುವರಿ 2018, 19:30 IST
Last Updated 24 ಫೆಬ್ರುವರಿ 2018, 19:30 IST
ಭಾರತ, ಚೀನಾ ವಿರುದ್ಧ ಟ್ರಂಪ್‌ ಟೀಕೆ
ಭಾರತ, ಚೀನಾ ವಿರುದ್ಧ ಟ್ರಂಪ್‌ ಟೀಕೆ   

ವಾಷಿಂಗ್ಟನ್‌: ಪ್ಯಾರಿಸ್‌ ಹವಾಮಾನ ವೈಪರೀತ್ಯ ತಡೆ ಒಪ್ಪಂದದಿಂದ ಅಮೆರಿಕ ಹಿಂದಕ್ಕೆ ಸರಿಯಲು ಭಾರತ ಹಾಗೂ ಚೀನಾ ಕಾರಣ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರೋಪಿಸಿದ್ದಾರೆ.

ಕನ್ಸ್‌ರ್ವೆಟಿವ್‌ ಪೊಲಿಟಿಕಲ್‌ ಆ್ಯಕ್ಷನ್‌ ಕಮಿಟಿಯ ಸಮ್ಮೇಳನ ಉದ್ದೇಶಿಸಿ ಅವರು ಮಾತನಾಡಿದರು.

ಒಪ್ಪಂದದಿಂದ ಹೆಚ್ಚು ಲಾಭ ಪಡೆಯುವ ರಾಷ್ಟ್ರಗಳಿಗಿಂತಲೂ ಅಮೆರಿಕವು ಹೆಚ್ಚು ನಷ್ಟ ಅನುಭವಿಸಬೇಕಾಗುತ್ತದೆ. ಹಾಗಾಗಿ ಇದೊಂದು ಅನ್ಯಾಯದ ಒಪ್ಪಂದ ಎಂದು ಅವರು ಪುನರುಚ್ಚರಿಸಿದ್ದಾರೆ.

ADVERTISEMENT

‘ಭಾರತ ಮತ್ತು ಚೀನಾದಂತಹ ರಾಷ್ಟ್ರಗಳಿಗೆ ಲಾಭಕರವಾಗಿರುವ ಇದು ನಮಗೆ ಅನ್ಯಾಯ ಮಾಡಿದೆ. ಒಪ್ಪಂದಕ್ಕೆ ಸಹಿ ಹಾಕಿದ್ದರೆ ಅಮೆರಿಕವು ದೊಡ್ಡ ವಿಪತ್ತು ಎದುರಿಸಬೇಕಿತ್ತು. ಹಾಗಾಗಿ, ಇದರಿಂದ ಹೊರಬರುವ ನಿರ್ಧಾರ ತೆಗೆದುಕೊಂಡೆ’ ಎಂದು ಅವರು ಹೇಳಿದ್ದಾರೆ.    

‘ನಮ್ಮ ರಾಷ್ಟ್ರವು ಅಪಾರ ಖನಿಜ ಸಂಪತ್ತನ್ನು ಹೊಂದಿದೆ. ಆದರೆ, ಒಪ್ಪಂದದ ಪ್ರಕಾರ ನಾವು ಅದನ್ನು ಬಳಸುವಂತಿಲ್ಲ. ಇದರಿಂದಾಗಿ ಎಲ್ಲ ರೀತಿಯ ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ನಾವು ಹಿಂದೆ ಬೀಳಲಿದ್ದೇವೆ’ ಎಂದು ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಅಮೆರಿಕದ ಪಾಲಿಗೆ ನ್ಯಾಯಯುತವಾಗಿರುವ ರೀತಿಯಲ್ಲಿ ಪ್ಯಾರಿಸ್‌ ಒಪ್ಪಂದದ ಮರುಸಂಧಾನಕ್ಕೂ ಸಿದ್ಧ ಎಂದು ಇದೇ ವೇಳೆ ಅವರು ಹೇಳಿದ್ದಾರೆ.

ಅಮೆರಿಕದ ಅರ್ಥವ್ಯವಸ್ಥೆಗೆ ಮಾರಕವಾಗಿರುವ ಒಪ್ಪಂದವಿದು. ಇದರಿಂದ ಉದ್ಯೋಗಾವಕಾಶಗಳು ಕಡಿಮೆಯಾಗುತ್ತವೆ. ರಾಷ್ಟ್ರದಲ್ಲಿ ಕೈಗಾರಿಕೆಗಳ ಬೆಳವಣಿಗೆಗೂ ತಡೆ ಒಡ್ಡಲಿದೆ ಎಂದು 2017ರ ಜೂನ್‌ನಲ್ಲಿ ಆರೋಪಿಸಿದ್ದ ಟ್ರಂಪ್, ಅಮೆರಿಕ ಇದರಿಂದ ಹೊರಬರಲಿದೆ ಎಂದು ಘೋಷಿಸಿದ್ದರು. ಇದಕ್ಕೆ ಜಗತ್ತಿನಾದ್ಯಂತ ಟೀಕೆಯನ್ನೂ ಅವರು ಎದುರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.