ADVERTISEMENT

ಭಾರತ ಚೀನಾ ಸಿಂಹಪಾಲು

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 19:30 IST
Last Updated 11 ಜನವರಿ 2012, 19:30 IST

ದುಬೈ (ಪಿಟಿಐ): ಆರ್ಥಿಕ ಬೆಳವಣಿಗೆ ಇಳಿಮುಖವಾಗಿದ್ದರೂ, ಜಗತ್ತಿನ ಆರ್ಥಿಕ ಅಭಿವೃದ್ಧಿಯಲ್ಲಿ ಭಾರತ ಹಾಗೂ ಚೀನಾದ ಪಾಲು ಅರ್ಧದಷ್ಟಿದೆ ಎಂದು ಹೂಡಿಕೆ ನಿರ್ವಹಣೆ ಮತ್ತು ಸಲಹಾ ಸಂಸ್ಥೆಯೊಂದರ ಇತ್ತೀಚಿನ ವರದಿಯಲ್ಲಿ ಹೇಳಲಾಗಿದೆ.

ಜಗತ್ತಿನ ಆರ್ಥಿಕ ಅಭಿವೃದ್ಧಿಯ ವಿಚಾರಕ್ಕೆ ಸಂಬಂಧಿಸಿದಂತೆ 2012 ವಿಭಿನ್ನ ಸಾಧ್ಯತೆಗಳ ವರ್ಷವಾಗಲಿದೆ ಎಂದು `ಬ್ಲಾಕ್‌ರಾಕ್ ಇನ್‌ವೆಸ್ಟ್‌ಮೆಂಟ್ ಇನ್‌ಸ್ಟಿಟ್ಯೂಟ್~ನ ವರದಿ ತಿಳಿಸಿದೆ.

ಭಾರಿ ಹೊಡೆತ ಅನುಭವಿಸಿದರೂ ಅಮೆರಿಕ ಆರ್ಥಿಕ ಅಭಿವೃದ್ಧಿ ಸಾಧಿಸಲಿದೆ. ಹಣಕಾಸು ವ್ಯವಸ್ಥೆ ಮತ್ತಷ್ಟು ಕುಸಿದು ಬೀಳುವುದನ್ನು ತಪ್ಪಿಸಲು ಯುರೋಪ್ ಆರ್ಥಿಕ ಹಿಂಜರಿಕೆಯತ್ತ ಜಾರಲಿದೆ.

ಜಗತ್ತಿನ ದೀರ್ಘ ಹಾಗೂ ಅಲ್ಪಕಾಲೀನ ಹಣಕಾಸು ಅಭಿವೃದ್ಧಿಯಲ್ಲಿ ಉದಯೋನ್ಮುಖ ಆರ್ಥಿಕತೆಗಳ ಪಾತ್ರ ಮಹತ್ವದ್ದಾಗಲಿದೆ. ಅದರಲ್ಲೂ ಭಾರತ ಮತ್ತು ಚೀನಾ ತಮ್ಮ ಗಾತ್ರ ಹಾಗೂ ಅಭಿವೃದ್ಧಿ ದರದ ಹಿನ್ನೆಲೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ.

ಈ ಎರಡೂ ದೇಶಗಳಲ್ಲಿ ಅಭಿವೃದ್ಧಿ ದರ 2011ರಲ್ಲಿ ಇದ್ದುದಕ್ಕಿಂತ 2012ರಲ್ಲಿ ಕುಸಿಯಲಿದೆ. ಆದರೆ ವಿಶ್ವದ ಒಟ್ಟು ಆರ್ಥಿಕ ಬೆಳವಣಿಗೆಯಲ್ಲಿ ಇವುಗಳ ಪಾಲು ಅರ್ಧಕ್ಕಿಂತ ಹೆಚ್ಚಾಗಲಿದೆ ಎಂದು ಈ ವರದಿ ತಿಳಿಸಿದೆ.

ಒಟ್ಟು ಜಾಗತಿಕ ಆರ್ಥಿಕ ಅಭಿವೃದ್ಧಿಯಲ್ಲಿ ಚೀನಾದ ಪಾಲು ಶೇ 40ರಷ್ಟಿರುತ್ತದೆ. ಅಮೆರಿಕ ಮತ್ತು ಭಾರತ ಒಟ್ಟಾಗಿ ಶೇ 15ರಷ್ಟು ಕೊಡುಗೆ ನೀಡಲಿವೆ ಎಂದು ಬ್ಲಾಕ್‌ರಾಕ್ ಸಂಸ್ಥೆಯ ಕಾರ್ಯತಂತ್ರಜ್ಞ ರಾಬರ್ಟ್ ಸಿ. ಡಾಲ್ ಹೇಳಿದ್ದಾರೆ.

ಯುರೋಪ್ ಅರ್ಥ ವ್ಯವಸ್ಥೆ ಕುಸಿಯುವುದು ಜಗತ್ತಿಗೆ ಅತಿದೊಡ್ಡ ಆಪತ್ತು ತಂದೊಡ್ಡಲಿದೆ. ಹಾಗಾದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳೆಲ್ಲ ಆಗ ಹೊಸ ಆರ್ಥಿಕ ಹಿಂಜರಿಕೆಯತ್ತ ಜಾರಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಯುರೋಪ್‌ನ ಸಾಲ ಮತ್ತು ಮರುಪಾವತಿ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಯತ್ನಗಳನ್ನು ಮುಂದುವರಿಸುವುದೇ 2012ರ ಬಹುದೊಡ್ಡ ಸಾಧನೆಯಾಗಲಿದೆ. ಹಾಗೆ ಮಾಡದಿದ್ದಲ್ಲಿ ಅದು ಭಾರಿ ಅನರ್ಥಕಾರಿಯಾಗಲಿದೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.