ADVERTISEMENT

ಭಾರತ ನಿಲುವಿಗೆ ನಶೀದ್ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 19:30 IST
Last Updated 14 ಫೆಬ್ರುವರಿ 2012, 19:30 IST

ಮಾಲೆ (ಪಿಟಿಐ): ರಾಷ್ಟ್ರದಲ್ಲಿ ನಡೆದ ಹಠಾತ್ ರಾಜಕೀಯ ಬೆಳವಣಿಗೆ ಬಗ್ಗೆ ಭಾರತ ಪ್ರತಿಕ್ರಿಯಿಸಿದ ರೀತಿಯಿಂದ ಹತಾಶರಾಗಿರುವ ಪದಚ್ಯುತ ರಾಷ್ಟ್ರಾಧ್ಯಕ್ಷ ಮೊಹಮ್ಮದ್ ನಶೀದ್, ಹೊಸ ಆಡಳಿತವು ಭಾರತಕ್ಕಿಂತ ಚೀನಾಕ್ಕೇ ಹೆಚ್ಚು ಅನುಕೂಲ ಮಾಡಿಕೊಡಬಹುದು ಎಂದಿದ್ದಾರೆ.

ಭಾರತ ತಮ್ಮ ಮಾಲ್ಡೀವ್ಸ್ ಡೆಮಾಕ್ರಟಿಕ್ ಪಕ್ಷವನ್ನು `ಆಟಕ್ಕುಂಟು ಲೆಕ್ಕಕಿಲ್ಲ~ ಎಂಬಂತೆ ಪರಿಗಣಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

`ನಮ್ಮ ಪಕ್ಷ ಸರಿಯಾಗಿ ಕಾರ್ಯ ನಿಭಾಯಿಸಲಿಲ್ಲ ಎಂಬುದು ಭಾರತದ ಅಭಿಪ್ರಾಯವಿರಬಹುದು. ಹಾಗೆಂದ ಮಾತ್ರಕ್ಕೆ ಮಾಜಿ ಸರ್ವಾಧಿಕಾರಿ ಅಬ್ದುಲ್ ಗಯೂಂ ನೇತೃತ್ವದ ಪಿಪಿಎಂ ಪಕ್ಷ ಅದಕ್ಕೆ ಪರ್ಯಾಯವೇ~ ಎಂದು ಅವರು ಕೇಳಿದ್ದಾರೆ. ರಾಷ್ಟ್ರದಲ್ಲಿ ಆಡಳಿತ ಗದ್ದುಗೆ ಹಿಡಿದಿರುವ ನೂತನ ಸರ್ಕಾರದ ವಿರುದ್ಧದ ಸಮರವನ್ನು ಸಂಸತ್‌ನಲ್ಲಿ ಮುಂದುವರಿಸುವ ಜತೆಗೆ, ಅಗತ್ಯಬಿದ್ದರೆ ನಾಗರಿಕ ಅಸಹಕಾರ ಚಳವಳಿಯನ್ನೂ ಹಮ್ಮಿಕೊಳ್ಳುವುದಾಗಿ ಮಾಲ್ಡೀವ್ಸ್ ಪದಚ್ಯುತ ಅಧ್ಯಕ್ಷ ಮೊಹಮ್ಮದ್ ನಶೀದ್ ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ರಾತ್ರಿ ಪಕ್ಷವು ಭಾರಿ ಬಹಿರಂಗ ಸಭೆಯನ್ನು ಆಯೋಜಿಸಿತ್ತು. ನಶೀದ್ ಸೇರಿದಂತೆ ಪಕ್ಷದ ಹಲವು ಸಂಸದರು ಐದು ಸಾವಿರದಷ್ಟಿದ್ದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು.

ರಾಷ್ಟ್ರದ ಸೇನಾಧಿಕಾರಿಗಳು ಮತ್ತು ಪೊಲೀಸರು ತಮ್ಮನ್ನು ಹತ್ಯೆ ಮಾಡುವ ಸಂಚು ಹೊಂದಿದ್ದಾರೆ ಎಂದೂ ಅವರು ಈ ವೇಳೆ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.