ADVERTISEMENT

ಭಾರತ ಸಂಜಾತೆ ಮಿಸ್‌ ಅಮೆರಿಕ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST

ನೂಜೆರ್ಸಿ/ಹ್ಯೂಸ್ಟನ್ (ಪಿಟಿಐ): ಭಾರತ ಮೂಲದ ನೀನಾ ದವುಲುರಿ (22) ಅವರು ‘ಮಿಸ್‌ ಅಮೆರಿಕ‘ ಕಿರೀಟ ಧರಿಸಿದ್ದು, ಇದೇ ಮೊದಲ ಬಾರಿ ಭಾರತ ಮೂಲದ ಯುವತಿ­ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದಕ್ಕೂ ಮುನ್ನ ಅವರು ‘ಮಿಸ್‌ ನ್ಯೂಯಾರ್ಕ್’ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು.

ಅಂತಿಮ ಸುತ್ತಿನಲ್ಲಿ   ಬಾಲಿವುಡ್‌ ಡ್ಯಾನ್ಸ್‌ ಮೂಲಕ  ನೀನಾ ತೀರ್ಪುಗಾರರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾದರು.
ಅಮೆರಿಕದ ವಿವಿಧ ರಾಜ್ಯಗಳ 53 ಯುವತಿಯರು ಸ್ಪರ್ಧೆಯಲ್ಲಿ ಭಾಗ­ವಹಿ­ಸಿದ್ದರು. ಮಿಸ್‌ ಕ್ಯಾಲಿ­ಫೋರ್ನಿಯಾ ಕ್ರಿಸ್ಟಲ್ ಲೀ ರನ್ನರ್‌ ಅಪ್‌ ಆಗಿ ಆಯ್ಕೆಯಾಗಿದ್ದಾರೆ. ಮಿಸ್‌ ಒಕ್ಲಹಾಮಾ ಕೆಸ್ಲೆ ಗ್ರಿಸ್ ವಲ್ಡ್ 3ನೇ ಸ್ಥಾನ ಪಡೆದುಕೊಂಡಿದ್ದಾರೆ.

ಗೌನ್ ತೊಡುಗೆ, ಜೀವನಶೈಲಿ,ಸದೃಢ ಕಾಯ, ಪ್ರತಿಭೆ, ವೈಯಕ್ತಿಕ ಸಂದರ್ಶನ ಹಾಗೂ ವೇದಿಕೆಯಲ್ಲಿ ಕೇಳಿದ ಪ್ರಶ್ನೆಗೆ ನೀಡಿದ ಉತ್ತರದ ಆಧಾರದಲ್ಲಿ ಮಿಸ್ ಅಮೆರಿಕ ಆಯ್ಕೆ ನಡೆಯಿತು. ನೀನಾ ತಮ್ಮ ತಂದೆಯಂತೆ ವೈದ್ಯೆಯಾಗುವ ಕನಸು ಕಂಡಿದ್ದಾರೆ.

ವಿರೋಧ: ನೀನಾ ಮಿಸ್ ಅಮೆರಿಕ ಆಗಿ ಆಯ್ಕೆ ಆಗಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಟ್ವಿಟರ್‌ನಲ್ಲಿ ಕೆಲವರು ‘ನೀನಾ ಅರಬ್‌ ಮೂಲದವಳಾಗಿದ್ದು, ಭಯೋತ್ಪಾದಕಿಯಾಗಿದ್ದಾಳೆ. ಅಲ್‌ ಖೈದಾ ಜತೆ ಸಂಪರ್ಕ ಹೊಂದಿದ್ದಾಳೆ’ ಎಂದು ಜರಿದಿದ್ದಾರೆ.

‘ನ್ಯೂಯಾರ್ಕ್‌ನಿಂದ ಹೊರಬೀಳು. ನೀನು ಭಯೋತ್ಪಾದಕಿಯಂತೆ ಕಾಣು­ತ್ತೀಯ’ ಎಂದು ಎಮಿ ಅಡ್ಕಿನ್ಸ್‌ ಎಂಬಾಕೆ ಟ್ವೀಟ್‌ ಮಾಡಿದ್ದಾಳೆ.  ಲ್ಯೂಕ್‌ ಬ್ರಾಸಿಲಿ ಎಂಬಾತ ಸೆಪ್ಟೆಂಬರ್‌ 11ರ ಭಯೋತ್ಪಾದನಾ ದಾಳಿಯನ್ನು ಉಲ್ಲೇಖಿಸಿ, ಈ ಸೌಂದರ್ಯ ಸ್ಪರ್ಧೆ ಬಗ್ಗೆ ಬರೆದಿದ್ದಾನೆ.  ‘ನಾಲ್ಕು ದಿನಗಳ ಹಿಂದಷ್ಟೇ 9/11ರ ವಾಷಿರ್ಕೋತ್ಸವ ಆಚರಿಸಿದ್ದೇವೆ. ಈಗ ಆಕೆ ಮಿಸ್‌ ಅಮೆರಿಕ ಗೆದ್ದಿದ್ದಾಳೆ’ ಎಂದು ಆತ ವಿಷಾದದಿಂದ ಹೇಳಿದ್ದಾನೆ.

  ‘ಅಭಿನಂದನೆಗಳು, ಅಲ್‌_ಖೈದಾ. ನಮ್ಮ ಮಿಸ್‌ ಅಮೆರಿಕ ನಿಮ್ಮಲ್ಲಿ ಒಬ್ಬಳು’ ಎಂದು ಬ್ಲಾಯ್ನ ಎಂಬಾತ ಟ್ವೀಟ್‌ ಮಾಡಿದ್ದಾನೆ. ಇದರಿಂದ ತಾವು ವಿಚಲಿತರಾಗಿಲ್ಲ ಎಂದು ನೀನಾ ಹೇಳಿದ್ದಾರೆ. ಎಲ್ಲಕ್ಕಿಂತ ಮುಂಚೆ ತಾನು ಅಮೆರಿಕನ್ನಳು ಎಂದು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.