ವಾಷಿಂಗ್ಟನ್ (ಪಿಟಿಐ): ಭೂಮಿಯ ಮೇಲ್ಪದರವು 4.4 ಶತಕೋಟಿ ವರ್ಷಗಳ ಹಿಂದೆ ಮತ್ತು ಸೌರ ಮಂಡಳ ವ್ಯವಸ್ಥೆ ನಿರ್ಮಾಣವಾದ 16 ಕೋಟಿ ವರ್ಷಗಳ ನಂತರ ನಿರ್ಮಾಣವಾಗಿದೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.
ಭೂಮಿಯ ಇತಿಹಾಸದ ಕುರಿತು ಅಧ್ಯಯನ ನಡೆಸಿದ ಸಂಶೋಧಕರು ಖನಿಜಾಂಶವಿರುವ ಆಸ್ಟ್ರೇಲಿಯಾದ ಜ್ಯಾಕ್ ಹಿಲ್ಸ್ ಮತ್ತು ಭೂಮಿಯ ಆರಂಭಿಕ ತಣ್ಣನೆಯ ಮೇಲ್ಪದರವು 4.4 ಶತಕೋಟಿ ವರ್ಷಗಳ ಹಿಂದೆ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾದ ಖನಿಜಾಂಶವಿರುವ ಬೆಟ್ಟದ ಮೇಲ್ಪದರದ ಒಂದು ಚೂರನ್ನು ತೆಗೆದುಕೊಂಡು ಅದನ್ನು ಸಂಶೋಧನೆಗೆ ಒಳಪಡಿಸಲಾಯಿತು. ನಂತರ ಅದನ್ನು ಚಿತ್ರಗಳ ಮೂಲಕ ವಿಶ್ಲೇಷಿಸಿ ಭೂಮಿ ವಾಸಯೋಗ್ಯ ಗ್ರಹವಾಗಿ ಹೇಗೆ ಮಾರ್ಪಟ್ಟಿತು ಎಂಬುದನ್ನು ತಿಳಿದುಕೊಳ್ಳಲಾಗಿದೆ.
ವಿಸ್ಕಾನ್ಸಿನ್ ಮೆಡಿಸನ್ ವಿಶ್ವವಿದ್ಯಾನಿಲಯದ ಭೂಗೋಳಶಾಸ್ತ್ರ ಪ್ರಾಧ್ಯಾಪಕ ಜಾನ್ ವ್ಯಾಲಿ ಅವರ ನೇತೃತ್ವದ ಅಂತರರಾಷ್ಟ್ರೀಯ ಸಂಶೋಧಕರ ತಂಡ ಈ ಮಾಹಿತಿಯನ್ನು ಬಹಿರಂಗಗೊಳಿಸಿದೆ.
ಬೆಂಕಿಯ ಉಂಡೆಯಂತಿದ್ದ ಭೂಮಿಯು ಕ್ರಮೇಣ ವಾಸಯೋಗ್ಯ ಹೇಗಾಯಿತು ಎನ್ನುವುದರ ಕುರಿತು ಈ ಸಂಶೋಧನೆ ಬೆಳಕು ಚೆಲ್ಲಿದೆ.
‘ಭೂಮಿ ತಣ್ಣಗಾಗಿ ವಾಸಯೋಗ್ಯವಾಯಿತು ಎನ್ನುವ ಪರಿಕಲ್ಪನೆ ನಿಜವಾಗಿದೆ. ಈ ಸಂಶೋಧನೆಯು ವಾಸಯೋಗ್ಯ ಗ್ರಹಗಳು ಹೇಗೆ ರೂಪುಗೊಳ್ಳುತ್ತವೆ ಎಂಬುದನ್ನು ತಿಳಿಯಲು ಅನುಕೂಲಕರವಾಗಲಿದೆ ಎಂದು ವ್ಯಾಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.