ADVERTISEMENT

ಭ್ರಷ್ಟಾಚಾರದ ಸುಳಿ: ಜರ್ಮನಿ ಅಧ್ಯಕ್ಷ ವುಲ್ಫ್ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 19:30 IST
Last Updated 17 ಫೆಬ್ರುವರಿ 2012, 19:30 IST

ಬರ್ಲಿನ್ (ಪಿಟಿಐ): ಹಲವು ಭ್ರಷ್ಟಾಚಾರ ಆರೋಪಗಳ ಸುಳಿಗೆ ಸಿಲುಕಿದ್ದ ಜರ್ಮನಿಯ ಅತಿ ಕಿರಿಯ ಅಧ್ಯಕ್ಷ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಕ್ರಿಶ್ಚಿಯನ್ ವುಲ್ಫ್ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಗೃಹ ಸಾಲ ವ್ಯವಹಾರಕ್ಕೆ ಸಂಬಂಧಿಸಿದಂತೆ 2003-10ರ ಅವಧಿಯಲ್ಲಿ ಲೋವರ್ ಸ್ಯಾಕ್ಸನಿ ಪ್ರಾಂತ್ಯದ ಪ್ರಧಾನಿಯಾಗಿದ್ದಾಗ ಲಂಚ ಪಡೆದಿರುವುದು ಸೇರಿದಂತೆ ಹಲವು ಆರೋಪಗಳು 52 ವರ್ಷದ ವುಲ್ಫ್  ವಿರುದ್ಧ ಕೇಳಿಬಂದಿದ್ದವು.

ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಆರೋಪಗಳ ವಿಚಾರಣೆ ನಡೆಸಲು ಅನುವು ಮಾಡಿಕೊಡಬೇಕೆಂದು  ಲೋವರ್ ಸ್ಯಾಕ್ಸನಿ ರಾಜಧಾನಿ ಹ್ಯಾನೊವರ್‌ನಲ್ಲಿರುವ ಪ್ರಾಸಿಕ್ಯೂಟರ್ ಕಚೇರಿಯು ಜರ್ಮನಿ ಸಂಸತ್‌ನ ಕೆಳಮನೆಗೆ ಗುರುವಾರ ಮನವಿ ಮಾಡಿತ್ತು.

ಯುದ್ಧೋತ್ತರ ಜರ್ಮನಿಯ ಇತಿಹಾಸದಲ್ಲಿ ರಾಷ್ಟ್ರದ ಅಧ್ಯಕ್ಷರೊಬ್ಬರು ಅಧಿಕಾರದಲ್ಲಿರುವಾಗಲೇ ಕ್ರಿಮಿನಲ್ ವಿಚಾರಣೆಗೆ ಒಳಪಡುತ್ತಿರುವುದು ಇದೇ ಮೊದಲಾಗಿದ್ದು, ಇದು ಇತ್ತೀಚಿನ ದಶಕಗಳಲ್ಲಿ ಜರ್ಮನಿ ಕಂಡ ಸಂಕಷ್ಟಮಯ ರಾಜಕೀಯ ಸನ್ನಿವೇಶ ಎನ್ನಲಾಗಿದೆ.

ವುಲ್ಫ್  ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಾಗಲೆಲ್ಲಾ ಅವರನ್ನು ನಿರಂತರವಾಗಿ ಸಮರ್ಥಿಸಿಕೊಳ್ಳುತ್ತಿದ್ದ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರು ಪ್ರಾಸಿಕ್ಯೂಟರ್ ಕಚೇರಿಯ ನಿರ್ಧಾರ ಕುರಿತು ಈಗ ಮೌನ ತಾಳಿದ್ದಾರೆ.

2010ರಲ್ಲಿ  ಮರ್ಕೆಲ್ ಅವರ ಕ್ರಿಶ್ಚಿಯನ್ ಡೆಮಾಕ್ರಟೆಕ್ ಯೂನಿಯನ್ (ಸಿಡಿಯು) ಪಕ್ಷವು, ಜರ್ಮನಿಯ ಅಧ್ಯಕ್ಷ ಗಾದಿಗೆ ಕ್ರಿಶ್ಚಿಯನ್ ವುಲ್ಫ್ ಅವರನ್ನು ನಾಮಕರಣ ಮಾಡಿತ್ತು ಮತ್ತು ಅವರ ಪರ ಮತವನ್ನೂ ಚಲಾಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.