ADVERTISEMENT

ಮಂಗಳ ಗ್ರಹ ಜೀವ ಪೋಷಕ

ಸುಳಿವು ನೀಡಿದ ಕ್ಯೂರಿಯಾಸಿಟಿ ರೋವರ್

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 19:40 IST
Last Updated 4 ಡಿಸೆಂಬರ್ 2012, 19:40 IST

ವಾಷಿಂಗ್ಟನ್ (ಪಿಟಿಐ): ಮಂಗಳ ಗ್ರಹದಲ್ಲಿ ಈ ಹಿಂದೆ ಜೀವಿಗಳು ಇದ್ದಿರಬಹುದು ಎಂಬ ವಾದಕ್ಕೆ ಪುಷ್ಟಿ ನೀಡುವಂತೆ `ಕ್ಯೂರಿಯಾಸಿಟಿ' ಕೆಲವು ಸುಳಿವುಗಳನ್ನು ಪತ್ತೆ ಹಚ್ಚಿದೆ.

ಆದರೆ, ಮಂಗಳ ಗ್ರಹದ ಮಣ್ಣಿನ ಬಗ್ಗೆ ದೊರೆತಿರುವ ಪ್ರಾಥಮಿಕ ಮಾಹಿತಿಯನ್ನು ಆಧಾರವಾಗಿರಿಸಿಕೊಂಡು ಈ ಹಿಂದೆ ಅಲ್ಲಿ ಜೀವಿಗಳು ನೆಲೆಸಿದ್ದವು ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ರೋವರ್‌ನಲ್ಲಿರುವ `ಮಂಗಳಗ್ರಹ ಮಾದರಿ ವಿಶ್ಲೇಷಣಾ ಉಪಕರಣ' (ಎಸ್‌ಎಎಂ) ಪತ್ತೆ ಹಚ್ಚಿರುವ  ಹಲವು ಸಂಯುಕ್ತಗಳಲ್ಲಿ  ಇಂಗಾಲ ಇರುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ಜೀವಿಗಳ ನೆಲೆಸುವಿಕೆಗೆ ಅಗತ್ಯವಾಗಿರುವ ಇಂಗಾಲವು ಮಂಗಳ ಗ್ರಹದಲ್ಲೇ ಇದ್ದಿದ್ದೋ ಅಥವಾ ಭೂಮಿಯಿಂದ ಹೋಗಿದ್ದೋ ಅಥವಾ ಸೂಕ್ಷ್ಮಾಣು ಜೀವಿಗಳನ್ನು ಹೊಂದಿದ್ದ ಯಾವುದಾದರೂ ಕ್ಷುದ್ರಗ್ರಹದ ಮಂಗಳ ಗ್ರಹಕ್ಕೆ ಅಪ್ಪಳಿಸಿದ್ದರಿಂದ ಕಂಡು ಬಂದಿದ್ದೋ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಒಂದು ವೇಳೆ ಪತ್ತೆಯಾದ ಇಂಗಾಲ ಅಂಗಾರಕನ ನೆಲದಲ್ಲೇ ಉತ್ಪತ್ತಿಯಾಗಿದ್ದಾದರೆ, ಅದು ಅಲ್ಲಿ ಜೀವಿಗಳು ನೆಲೆಸಿರಬಹುದು ಎಂಬುದಕ್ಕೆ ಪ್ರಮುಖ ಸುಳಿವಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

`ಸದ್ಯದ ಪರಿಸ್ಥಿತಿಯಲ್ಲಿ ಇಂಗಾಲ ಅಲ್ಲಿಗೆ ಬಂದ್ದ್ದಿದು ಎಲ್ಲಿಂದ ಎಂದು ಹೇಳಲು ಸಾಧ್ಯವಿಲ್ಲ' ಎಂದು ಮಂಗಳ ಅಧ್ಯಯನ ಯೋಜನೆಯ ಪ್ರಮುಖ ವಿಜ್ಞಾನಿ ಜಾನ್ ಗ್ರಾಟ್ಜಿಂಗರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.