ADVERTISEMENT

ಮಕ್ಕಳ ಕೊಂದಾಯ್ತು, ಮುಂದೆ?

ಸೇನಾ ಶಾಲೆಯಲ್ಲಿ ಹತ್ಯಾಕಾಂಡ: ಸಂಚುಕೋರನಿಗೆ ಕೇಳಿದ್ದ ಉಗ್ರ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2014, 19:30 IST
Last Updated 18 ಡಿಸೆಂಬರ್ 2014, 19:30 IST

ಪೆಶಾವರ (ಪಿಟಿಐ): ‘ಸಭಾಂಗಣದ­ಲ್ಲಿ­ರುವ ಎಲ್ಲಾ ಮಕ್ಕಳನ್ನೂ ಕೊಂದು ಹಾಕಿದ್ದೇವೆ. ಮುಂದೇನು ಮಾಡು­ವುದು?’– ತಾಲಿಬಾನಿ ಉಗ್ರರಲ್ಲಿ ಒಬ್ಬಾತ ಹತ್ಯಾಕಾಂಡದ ಸಂಚುಕೋರ­ನನ್ನು ಕೇಳಿದ ಪ್ರಶ್ನೆ.

‘ಸೇನಾ ಸಿಬ್ಬಂದಿ ಬರುವವರೆಗೂ ಕಾದು, ಅವರು ನಿನ್ನನ್ನು ಸುಡುವ ಮೊದಲು ಅವರನ್ನು ಸಾಯಿಸು’– ಇದು ಸಂಚುಕೋರನಿಂದ ಬಂದ ಆದೇಶ. ಪೆಶಾವರದ ಸೇನಾ ಶಾಲೆ ಮೇಲೆ ನಡೆದ ದಾಳಿ ವೇಳೆ ಇಬ್ಬರು ಆತ್ಮಾಹುತಿ ಬಾಂಬ್‌ ದಾಳಿಕೋರರು ಶಾಲೆಯ ಪ್ರವೇಶದ್ವಾರದ ಬಳಿ ಸುತ್ತುವರಿಯುತ್ತಿದ್ದ ಸೇನಾ ಪಡೆಗಳತ್ತ ನುಗ್ಗುವ ತುಸು ಮೊದಲು ದಾಳಿಕೋರರು ಮತ್ತು ಸಂಚು­ಕೋರನ  ನಡುವೆ ನಡೆದ ಕೊನೆಯ ಮಾತುಕತೆಯನ್ನು ‘ಡಾನ್‌’ ಪ್ರಕಟಿಸಿದೆ.

‘ಇಡೀ ಏಳೂವರೆ ಗಂಟೆ ದಾಳಿಯ ನಂತರ ದಾಳಿಕೋರರು ಮತ್ತು ಅವರ ಸಂಚುಕೋರನ ನಡುವೆ  ನಡೆದ ದೂರವಾಣಿ ಸಂಭಾಷಣೆಯ ವಿವರ­ಗಳನ್ನು ಸೇನಾ ಮುಖ್ಯಸ್ಥ ಜನರಲ್‌ ರಹೀಲ್‌ ಷರೀಫ್‌ ಅವರು ಆಫ್ಘನ್‌ ಅಧಿಕಾರಿಗಳೊಂದಿಗೆ ಬುಧವಾರ ಹಂಚಿಕೊಂಡಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.

ದಾಳಿಕೋರರನ್ನು ಗುರುತಿಸಿರುವ ಪಾಕಿಸ್ತಾನವು ದಾಳಿಕೋರ ಅಬುಜರ್‌ ಮತ್ತು ಸಂಚುಕೋರ ಕಮಾಂಡರ್ ಉಮರ್‌  ನಡುವೆ ನಡೆದ ಮಾತುಕತೆಯ ವಿವರಗಳನ್ನು ಪಡೆದುಕೊಂಡಿದೆ ಎಂದು ಪತ್ರಿಕೆ ತಿಳಿಸಿದೆ.

‘ಉಮರ್‌ ನರೈ ಮತ್ತು ಉಮರ್‌ ಖಲೀಫ ಎಂಬ ಹೆಸರುಗಳನ್ನೂ ಹೊಂದಿರುವ ಉಮರ್‌ ಅದಿಜೈ ಪೆಶಾವರ ಗಡಿ ಪ್ರದೇಶದ ಹಿರಿಯ ಉಗ್ರ. ಆಫ್ಘಾನಿಸ್ತಾನದ ನಂಗ್ರಹಾರ್‌ ಪ್ರಾಂತ್ಯದ ನಾಜಿಯಾನ್‌ ಜಿಲ್ಲೆಯಿಂದ ಆತ ಕರೆಗಳನ್ನು ಮಾಡಿರುವುದಾಗಿ ಭದ್ರತಾ ಅಧಿಕಾರಿಗಳು ಊಹಿಸಿದ್ದಾರೆ’ ಎಂದು ಪತ್ರಿಕೆ ವರದಿ ಮಾಡಿದೆ.

ತಾಲಿಬಾನ್‌ ಮುಖ್ಯಸ್ಥ ಮುಲ್ಲಾ ಫಜ್ಲುಲ್ಲಾ ಸೇರಿದಂತೆ 16 ಪ್ರಮುಖ ಉಗ್ರರು ಈ ಹತ್ಯಾಕಾಂಡ ಸಂಚು ರೂಪಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಏಳು ದಾಳಿಕೋರರಲ್ಲಿ ಐದು ಉಗ್ರರು ಆಡಳಿತ ಬ್ಲಾಕ್‌ನಲ್ಲಿ ತಮ್ಮನ್ನು ತಾವು ಸ್ಫೋಟಿಸಿಕೊಂಡರೆ, ಉಳಿದ ಇಬ್ಬರು ಹೊರಗೆ ಸ್ಫೋಟಿಸಿಕೊಂಡರು ಎಂದು ಪತ್ರಿಕೆ ಹೇಳಿದೆ.

ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌

ಪೆಶಾವರ ಸೇನಾ ಶಾಲೆ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ತಾಲಿಬಾನ್‌ ಮುಖ್ಯಸ್ಥ ಮುಲ್ಲಾ ಫಜ್ಲುಲ್ಲಾ, ಉಪಮುಖ್ಯಸ್ಥ ಖಾಲಿದ್‌ ಹಕ್ಕಾನಿ ಮತ್ತು 14 ಪ್ರಮುಖ ಕಮಾಂಡರ್‌ಗಳ ವಿರುದ್ಧ ಮಚ್ನಿ ಗೇಟ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ADVERTISEMENT

ಏಣಿಯನ್ನು ಬಳಸಿ ಕಟ್ಟಡದ ಹಿಂಬದಿಯ ಗೋಡೆ ಹತ್ತಿದ ಉಗ್ರರು ಗೋಡೆ ಮೇಲಿದ್ದ ತಂತಿ ಕತ್ತರಿಸಿ ಒಳಗೆ ಪ್ರವೇಶಿಸಿದರು. ಬಳಿಕ ಹಿರಿಯ ವಿದ್ಯಾರ್ಥಿ­ಗಳಿಗೆ ಪ್ರಥಮ ಚಿಕಿತ್ಸೆ ಕುರಿತು ಮಾಹಿತಿ ನೀಡಲಾಗುತ್ತಿದ್ದ ಮುಖ್ಯ ಸಭಾಂಗಣಕ್ಕೆ ಮುತ್ತಿಗೆ ಹಾಕಿದರು. ಮುಖ್ಯ ಸಭಾಂಗಣದಲ್ಲಿ ಇಷ್ಟು ಜನ ಸೇರುವುದು ಅವರಿಗೆ ಮೊದಲೇ ತಿಳಿದಿತ್ತೇ? ಇದು ನಾವು ಉತ್ತರ ಹುಡುಕುತ್ತಿರುವ ಪ್ರಶ್ನೆಗಳಲ್ಲಿ ಒಂದು ಎಂಬ ಭದ್ರತಾ ಅಧಿಕಾರಿಯೊಬ್ಬರು ಹೇಳಿಕೆಯನ್ನು ಪತ್ರಿಕೆ ಉಲ್ಲೇಖಿಸಿದೆ.

ಸಭಾಂಗಣದ ಹಿಂಬದಿಯಲ್ಲಿ ನಿಂತಿದ್ದ ಕಾವಲುಗಾರನ ಮೇಲೆ ಉಗ್ರರು ಮೊದಲು ಗುಂಡು ಹಾರಿಸಿ ಸಾಯಿಸಿ­ದರು. ಹಿಂಬದಿ ಬಾಗಿಲು ಮುಚ್ಚಿರು­ವುದನ್ನು ಕಂಡು ಮುಖ್ಯದ್ವಾರ ಹಾಗೂ ಹೊರ ಹೋಗುವ ದ್ವಾರದ ಮೂಲಕ ಸಭಾಂಗಣದ ಒಳ ನುಗ್ಗಿದರು.

‘ಅಲ್ಲಿ ರಕ್ತ ಸಿಕ್ತ ದೇಹಗಳ ರಾಶಿಯೇ ತುಂಬಿತ್ತು. ಹೆಚ್ಚಿನವರು ಸತ್ತಿದ್ದರೆ, ಕೆಲವರು ಜೀವಂತವಿದ್ದರು. ಎಲ್ಲೆಡೆಯೂ ರಕ್ತ ಚೆಲ್ಲಾಡಿತ್ತು. ನಾನು ಈ ದೃಶ್ಯವನ್ನು ನೋಡುವಂತಾಗಬಾರದಿತ್ತು’ ಎಂದು ಅಧಿಕಾರಿ ಹೇಳಿದ್ದಾರೆ. ಮೊದಲ ಸುತ್ತಿನ ಗುಂಡಿನ ಸದ್ದು ಕೇಳುತ್ತಿದ್ದಂತೆಯೇ ವಿದ್ಯಾರ್ಥಿಗಳು ಜಾಗದಿಂದ ಹೊರಗೆ ಓಡಲು ಮುಂದಾ­ದರು. ಆದರೆ ಎರಡೂ ದ್ವಾರಗಳನ್ನು ಮುಚ್ಚಿದ್ದ ಉಗ್ರರು ಅವರಿಗಾಗಿ ಕಾದು ನಿಂತಿದ್ದರು.

ಸಭಾಂಗಣದ ಒಳಗೆ ರಕ್ತ ಹರಿ­ದಾಡಿತ್ತು. ಮಕ್ಕಳು ಮತ್ತು ಶಿಕ್ಷಕಿಯರ ಶೂಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಎಂದು ಪತ್ರಿಕೆ ಅಲ್ಲಿನ ಸನ್ನಿವೇಶವನ್ನು ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.