ADVERTISEMENT

ಮನ್ರೊಗೆ ನೊಬೆಲ್‌ ಸಾಹಿತ್ಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2013, 19:30 IST
Last Updated 10 ಅಕ್ಟೋಬರ್ 2013, 19:30 IST
ಮನ್ರೊಗೆ ನೊಬೆಲ್‌ ಸಾಹಿತ್ಯ ಪ್ರಶಸ್ತಿ
ಮನ್ರೊಗೆ ನೊಬೆಲ್‌ ಸಾಹಿತ್ಯ ಪ್ರಶಸ್ತಿ   

ಸ್ಟಾಕ್‌ಹೋಮ್‌ (ಎಎಫ್‌ಪಿ): ಸಮಕಾಲೀನ ಸಣ್ಣ ಕಥೆಗಳ ಮೂಲಕ ಮನುಷ್ಯನ ದೌರ್ಬಲ್ಯಗಳ ಮೇಲೆ ಬೆಳಕು ಚೆಲ್ಲಿದ ಕೆನಡಾದ ಲೇಖಕಿ ಅಲೈಸ್‌ ಮನ್ರೊ ಅವರು ನೊಬೆಲ್‌ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜಗತ್ತಿನ ಅತಿ ಶ್ರೇಷ್ಠ ಪ್ರಶಸ್ತಿ ಎನಿಸಿಕೊಂಡಿರುವ ನೊಬೆಲ್‌ಗೆ ಪಾತ್ರವಾಗಿರುವ ಮನ್ರೊ ಕೆನಡಾದ ಮೊದಲ ಮತ್ತು ವಿಶ್ವದ 13ನೇ ಮಹಿಳೆ ಯಾಗಿದ್ದಾರೆ. ರೂ7.78 ಕೋಟಿ ಬಹುಮಾನ ಮೊತ್ತವನ್ನು ಅವರು ಪಡೆಯಲಿದ್ದಾರೆ.

ಮನೋವೈಜ್ಞಾನಿಕ ವಾಸ್ತವಾಂಶ ಮತ್ತು ಅತ್ಯಂತ ಸ್ಪಷ್ಟತೆಯೊಂದಿಗೆ ಸಣ್ಣ ಕಥೆಗಳಲ್ಲಿನ ಪಾತ್ರಗಳನ್ನು ಅತ್ಯುತ್ತಮ ಶೈಲಿಯಲ್ಲಿ ಹೆಣೆದಿರುವ ಮನ್ರೊ ಅವರನ್ನು ವಿಮರ್ಶಕರು, ಕೆನಡಾದ ಖ್ಯಾತ ಲೇಖಕ ಚೆಕೊವ್‌ ಅವರಿಗೆ ಹೋಲಿಸಿದ್ದಾರೆ.

‘ಮನ್ರೊ ಅವರ ಸಣ್ಣ ಕಥೆಗಳು ನಗರಗಳ ಸಮಕಾಲೀನ ಒಟ್ಟು ಜೀವನ ಶೈಲಿಯನ್ನು ವಿವರಿಸುತ್ತವೆ. ಸಾಮಾಜಿಕ ಮಾನ್ಯತೆಗಾಗಿ ನಡೆಸುವ ಹೋರಾಟ, ತಲೆಮಾರುಗಳ ಅಂತರದಿಂದ ಉಂಟಾಗುವ ನೈತಿಕ ಘರ್ಷಣೆ ಸೇರಿದಂತೆ ವಿವಿಧ ಆಯಾಮಗಳ ಮೇಲೆ ಬೆಳಕು ಹರಿಸುತ್ತವೆ’ ಎಂದಿದ್ದಾರೆ.

ಹೋದ ವರ್ಷ ಚೀನಾದ ಕಾದಂಬರಿಕಾರ ಮೊ ಯನ್‌ ಅವರಿಗೆ ನೊಬೆಲ್‌ ಸಾಹಿತ್ಯ ಪ್ರಶಸ್ತಿ ನೀಡಲಾಗಿತ್ತು.

ಬರುವ ಡಿಸೆಂಬರ್‌ 10ರಂದು ಸ್ಟಾಕ್‌ಹೋಮ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ನೊಬೆಲ್‌ ಪ್ರಶಸ್ತಿ ಆಯ್ಕೆ ಸಮಿತಿ ತಿಳಿಸಿದೆ.

ಖ್ಯಾತ ವಿಜ್ಞಾನಿ ಆಲ್‌ಫ್ರೆಡ್‌ ನೊಬೆಲ್‌ ಅವರ ಸ್ಮರಣಾರ್ಥ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಗಣನೀಯ ಸೇವೆಗಾಗಿ 1901ರಿಂದ ನೊಬೆಲ್‌ ಪ್ರಶಸ್ತಿ ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.