ADVERTISEMENT

ಮಲಾಲ ದೇಹ ಸ್ಥಿತಿ ಇನ್ನೂ ಗಂಭೀರ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 19:30 IST
Last Updated 11 ಅಕ್ಟೋಬರ್ 2012, 19:30 IST
ಮಲಾಲ ದೇಹ ಸ್ಥಿತಿ ಇನ್ನೂ ಗಂಭೀರ
ಮಲಾಲ ದೇಹ ಸ್ಥಿತಿ ಇನ್ನೂ ಗಂಭೀರ   

ಲಾಹೋರ್/ಇಸ್ಲಾಮಾಬಾದ್ (ಪಿಟಿಐ/ಐಎಎನ್‌ಎಸ್): ಹೆಣ್ಣು ಮಕ್ಕಳ ಶಿಕ್ಷಣದ ಕುರಿತು ದನಿಯೆತ್ತಿದ ಕಾರಣಕ್ಕೆ ತಾಲಿಬಾನ್ ಉಗ್ರರಿಂದ ದಾಳಿಗೆ ಒಳಗಾಗಿರುವ ಪಾಕಿಸ್ತಾನದ ಬಾಲಕಿ ಮಲಾಲ ಯುಸೂಫ್‌ಝೈ ದೇಹಾರೋಗ್ಯ ಇನ್ನೂ ಗಂಭೀರವಾಗಿದ್ದು, ಗುರುವಾರ ಸಂಜೆ ಪೇಶಾವರದಿಂದ ರಾವಲ್ಪಿಂಡಿಯ ಸೇನಾ ಆಸ್ಪತ್ರೆಗೆ ಆಕೆಯನ್ನು ಸ್ಥಳಾಂತರಗೊಳಿಸಲಾಗಿದೆ.

ಶಸ್ತ್ರಚಿಕಿತ್ಸೆ ನಂತರದ ಹೆಚ್ಚಿನ ಆರೈಕೆಗಾಗಿ ಆಕೆಯನ್ನು ರಾವಲ್ಪಿಂಡಿಗೆ ವೈಮಾನಿಕ ಮಾರ್ಗವಾಗಿ ಸ್ಥಳಾಂತರಿಸ ಲಾಗಿದೆ. ಬುಧವಾರ ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಆಕೆಯ ಬೆನ್ನುಹುರಿಗೆ ಹೊಕ್ಕಿದ್ದ ಗುಂಡನ್ನು ಹೊರತೆಗೆಯಲಾಗಿತ್ತು. ಆಕೆ ಚೇತರಿಸಿಕೊಳ್ಳುತ್ತಿದ್ದರೂ ದೇಹಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಲಾಲ ಡೈರಿಯ ತುಣುಕುಗಳು
`ಶಾಲೆಗೆ ಹೋಗಲು ನನಗೆ ಭಯವಾಗುತ್ತದೆ. ಏಕೆಂದರೆ ಹೆಣ್ಣು ಮಕ್ಕಳು ಶಾಲೆಗೆ ಹೋಗದಂತೆ ತಾಲಿಬಾನ್ ಫತ್ವಾ ಹೊರಡಿಸಿದೆ.~  `ನಿನ್ನೆ ನನಗೆ ಭಯಾನಕ ಕನಸು ಬಿದ್ದಿತ್ತು. ಅದರಲ್ಲಿ ಸೇನೆಯ ಹೆಲಿಕಾಪ್ಟರ್‌ಗಳು ಹಾಗೂ ತಾಲಿಬಾನ್ ಉಗ್ರರು ಕಾಣಿಸಿಕೊಂಡಿದ್ದರು.

ಸ್ವಾತ್‌ನಲ್ಲಿ ಸೇನಾ ದಾಳಿ ನಡೆಯುತ್ತಿದ್ದಾಗಿನಿಂದ ನನಗೆ ಅಂತಹ ಕನಸುಗಳು ಬೀಳುತ್ತಿವೆ. ತಾಲಿಬಾನ್ ಫತ್ವಾದಿಂದಾಗಿ ಶಾಲೆಗೆ ಹೋಗಲು ಭಯವಾಗುತ್ತಿದೆ. 27 ಜನರಿರುವ ನಮ್ಮ ಕ್ಲಾಸ್‌ನಲ್ಲಿ ಕೇವಲ 11 ಜನ ಮಾತ್ರ ಶಾಲೆಗೆ ಬಂದಿದ್ದರು.~

`ನಾನು ಶಾಲೆಗೆ ಹೋಗಲು ಸಿದ್ಧಳಾಗುತ್ತಿದೆ. ಯುನಿಫಾರಂ ಹಾಕಿಕೊಳ್ಳುತ್ತಿದ್ದಾಗ ಪ್ರಾಂಶುಪಾಲರ ಮಾತು ನೆನಪಾಯಿತು. ಹಾಗಾಗಿ ನನ್ನ ಇಷ್ಟದ ಗುಲಾಬಿ ಬಣ್ಣದ ಉಡುಪು ಧರಿಸಿ ಶಾಲೆಗೆ ಹೋದೆ. ನನ್ನಂತೆ ಎಲ್ಲರೂ ಬಣ್ಣ, ಬಣ್ಣದ ಉಡುಪು ಧರಿಸಿದ್ದರು. ತಾಲಿಬಾನ್ ಆಕ್ಷೇಪಿಸುವುದರಿಂದ ಇನ್ನು ಮುಂದೆ ಬಣ್ಣದ ಉಡುಪು ಧರಿಸದಂತೆ ಸಹ ಶಿಕ್ಷಕರು ಎಚ್ಚರಿಸಿದರು.~

ಇದು ತಾಲಿಬಾನ್ ಉಗ್ರರಿಂದ ಗುಂಡಿನ ದಾಳಿಗೆ ಒಳಗಾದ ಪಾಕ್ ಬಾಲಕಿ ಮಲಾಲಳ ಡೈರಿಯ ತುಣುಕುಗಳು. ತನ್ನ ಕಾವ್ಯನಾಮ ಗುಲ್ ಮಕಾಯ್ ಹೆಸರಿನಲ್ಲಿ ಮಲಾಲ ಬಿಬಿಸಿಗಾಗಿ ಉರ್ದುವಿನಲ್ಲಿ ಈ ಡೈರಿ ಬರೆದಿದ್ದಳು.

ಮೂನ್ ಖಂಡನೆ
ವಿಶ್ವಸಂಸ್ಥೆ/ವಾಷಿಂಗ್ಟನ್ (ಪಿಟಿಐ): 
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಮಲಾಲ ಮೇಲೆ ನಡೆದ ದಾಳಿಯನ್ನು ಖಂಡಿಸ್ದ್ದಿದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹಾಗೂ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಸಹ ಈ ಘಟನೆಯನ್ನು ಖಂಡಿಸಿದ್ದಾರೆ.

ವಿಶೇಷ ಪ್ರಾರ್ಥನೆ
ಇಸ್ಲಾಮಾಬಾದ್ (ಪಿಟಿಐ):
ಮಲಾಲ ಆರೋಗ್ಯಕ್ಕಾಗಿ ಪಾಕಿಸ್ತಾನದಾದ್ಯಂತ ಜನ ಗುರುವಾರ ಪ್ರಾರ್ಥನೆ ಸಲ್ಲಿಸಿದ್ದಾರೆ. ಪಾಕ್‌ನ ಹಲವು ಮೌಲ್ವಿಗಳು ಶುಕ್ರವಾರವನ್ನು ಪ್ರಾರ್ಥನೆಯ ದಿನವಾಗಿ (ಯೋಮ್-ಎ-ದುವಾ) ಆಚರಿಸುವಂತೆ ಕರೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.