ADVERTISEMENT

ಮಸೂದ್‌ ಅಜರ್‌ವಿರುದ್ಧ ಕ್ರಮ ಏಕಿಲ್ಲ

ಪತ್ರಕರ್ತನ ಮೇಲಿನ ನಿರ್ಬಂಧಕ್ಕೆ ಆಕ್ರೋಶ * ಪಾಕ್‌ ಸರ್ಕಾರಕ್ಕೆ ‘ದಿ ನೇಷನ್’ ಪ್ರಶ್ನೆ

ಪಿಟಿಐ
Published 12 ಅಕ್ಟೋಬರ್ 2016, 19:30 IST
Last Updated 12 ಅಕ್ಟೋಬರ್ 2016, 19:30 IST
ಸಿರಿಲ್ ಅಲ್ಮೇಡಾ
ಸಿರಿಲ್ ಅಲ್ಮೇಡಾ   

ಇಸ್ಲಾಮಾಬಾದ್ (ಪಿಟಿಐ): ಜೈಷ್ ಎ ಮೊಹಮ್ಮದ್ ಮುಖಂಡ ಮಸೂದ್ ಅಜರ್ ಹಾಗೂ ಜಮಾತ್ ಉದ್ ದವಾ ಮುಖಂಡ ಹಫೀಜ್ ಸಯೀದ್ ವಿರುದ್ಧ ಕ್ರಮ ಕೈಗೊಂಡರೆ ದೇಶದ ಭದ್ರತೆಗೆ ಅಪಾಯ ಹೇಗೆ ಎಂದು ಪಾಕಿಸ್ತಾನದ ಪ್ರಮುಖ ದೈನಿಕವೊಂದು ಸರ್ಕಾರ ಹಾಗೂ ಸೇನೆಯನ್ನು ಪ್ರಶ್ನಿಸಿದೆ.

‘ದಿ ನೇಷನ್’ ದಿನಪತ್ರಿಕೆ ತನ್ನ ಸಂಪಾದಕೀಯದಲ್ಲಿ ಈ ಪ್ರಶ್ನೆಯನ್ನು ಎತ್ತಿದೆ. ಪತ್ರಿಕೆಯು ಸರ್ಕಾರ ಹಾಗೂ ಸೇನೆಯ ಜೊತೆ ಉತ್ತಮ ಸಂಬಂಧ ಹೊಂದಿದೆ ಎನ್ನಲಾಗಿದೆ. ಪಾಕಿಸ್ತಾನದ ಸೇನೆಯು ಕೆಲವು ಭಯೋತ್ಪಾದಕ ಸಂಘಟನೆಗಳಿಗೆ ಪರೋಕ್ಷ ಬೆಂಬಲ ನೀಡುತ್ತಿದೆ ಎಂದು ‘ಡಾನ್’ ಪತ್ರಿಕೆಯಲ್ಲಿ ವರದಿ ಪ್ರಕಟಿಸಿದ ಪತ್ರಕರ್ತ ಸಿರಿಲ್ ಅಲ್ಮೇಡಾ ಪಾಕಿಸ್ತಾನ ತೊರೆಯುವಂತಿಲ್ಲ ಎಂದು ಸರ್ಕಾರ ನಿರ್ಬಂಧ ಹೇರಿರುವ ನಡುವೆಯೇ, ‘ದಿ ನೇಷನ್’ ಈ ಪ್ರಶ್ನೆ ಎತ್ತಿದೆ.

‘ಸ್ನೇಹಿತರನ್ನು ಕಳೆದುಕೊಳ್ಳುವುದು, ಜನರನ್ನು ದೂರ ಮಾಡುವುದು ಹೇಗೆ?’ ಎಂಬ ತಲೆಬರಹದ ಅಡಿ ಸಂಪಾದಕೀಯ ಪ್ರಕಟಿಸಿರುವ ‘ದಿ ನೇಷನ್’, ‘ಸರ್ಕಾರ ಹಾಗೂ ಸೇನೆಯು ಅಜರ್, ಸಯೀದ್ ವಿರುದ್ಧ ಕ್ರಮ ಜರುಗಿಸುವ ಬದಲು ಮಾಧ್ಯಮಗಳಿಗೆ ಬೋಧನೆ ಮಾಡುತ್ತಿವೆ’ ಎಂದು ತರಾಟೆಗೆ ತೆಗೆದುಕೊಂಡಿದೆ.

ADVERTISEMENT

ಪಠಾಣ್‌ ಕೋಟ್‌ ವಾಯುನೆಲೆ ಮೇಲಿನ ದಾಳಿಯ ಸಂಚುಕೋರ ಅಜರ್‌ ಹಾಗೂ ಮುಂಬೈ ಮೇಲಿನ ದಾಳಿಯ ಪ್ರಮುಖ ಸಂಚುಕೋರ ಸಯೀದ್‌ ಪಾಕಿಸ್ತಾನದಲ್ಲಿ ಮುಕ್ತವಾಗಿ ಓಡಾಡಿಕೊಂಡು ಇದ್ದಾರೆ. ಇವರಿಬ್ಬರಿಗೆ ಪಾಕಿಸ್ತಾನಿ ಸೇನೆಯ ರಕ್ಷಣೆ ಇದೆ ಎನ್ನಲಾಗಿದೆ.

‘ಮಾಧ್ಯಮಗಳು ತಮ್ಮ ಕೆಲಸವನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಬೋಧನೆ ಮಾಡಲು ಸೇನೆ ಹಾಗೂ ಸರ್ಕಾರದ ಮುಖ್ಯಸ್ಥರು ಸಭೆ ಸೇರಿದ್ದು ಮನಸ್ಸನ್ನು ಕಲಕುವಂಥದ್ದು’ ಎಂದು ಪತ್ರಿಕೆ ಖಾರವಾಗಿ ಬರೆದಿದೆ.

ಭಯೋತ್ಪಾದಕ ಸಂಘಟನೆಗಳನ್ನು ನಿಯಂತ್ರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ‘ದಿ ಡಾನ್’ ಪತ್ರಿಕೆಯು ಸರ್ಕಾರ ಮತ್ತು ಸೇನೆ ನಡುವೆ ನಡೆದ ಮಾತುಕತೆಯೊಂದನ್ನು ವರದಿ ಮಾಡಿತ್ತು.

‘ಅಲ್ಮೇಡಾ ಅವರು ಬರೆದ ಈ ವರದಿಯಿಂದ ಸರ್ಕಾರಕ್ಕೆ ಉಂಟಾದ ಕೋಪವನ್ನು, ವರದಿ ನಿರಾಕರಿಸುವ ಮೂರು ಹೇಳಿಕೆಗಳು, ಆನ್‌ಲೈನ್‌ ಮೂಲಕ ನಡೆಸಿದ ದಾಳಿಗಳು ತಣಿಸಲಿಲ್ಲ. ಈಗ ಸರ್ಕಾರವು, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವರದಿಗಳನ್ನು ಪ್ರಕಟಿಸುವಾಗ ವಿಶ್ವದೆಲ್ಲೆಡೆ ಅನುಸರಿಸುವ ನಿಯಮಗಳ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದೆ’ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.

‘ಅಲ್ಮೇಡಾ ಬರೆದ ವರದಿಯು ಕಪೋಲ ಕಲ್ಪಿತ ಎಂದು ಹೇಳಲಾಯಿತು. ಆದರೆ, ನಿಷೇಧಿತ ಸಂಘಟನೆಗಳು ಪಾಕಿಸ್ತಾನದಲ್ಲಿ ಅಸ್ತಿತ್ವ ಹೊಂದಿರುವುದನ್ನು ಕೆಲವು ಸಂಸದರು ಏಕೆ ಪ್ರತಿಭಟಿಸುತ್ತಿದ್ದಾರೆ ಎಂಬುದನ್ನು ಸರ್ಕಾರ ಹಾಗೂ ಸೇನೆಯ ಸಭೆಯು ಸ್ಪಷ್ಟಪಡಿಸಿಲ್ಲ. ಅಥವಾ, ಅಜರ್‌ ಹಾಗೂ ಸಯೀದ್‌ ವಿರುದ್ಧ ಕೈಗೊಳ್ಳಬಹುದಾದ ಕ್ರಮವು ರಾಷ್ಟ್ರದ ಭದ್ರತೆಗೆ ಏಕೆ ಅಪಾಯ ತರುತ್ತದೆ ಎಂಬುದನ್ನೂ ಹೇಳಿಲ್ಲ. ಪಾಕಿಸ್ತಾನ ವಿಶ್ವದಲ್ಲಿ ಮತ್ತಷ್ಟು ಒಬ್ಬಂಟಿ ಆಗುತ್ತಿರುವುದು ಏಕೆ ಎನ್ನುವುದನ್ನೂ ವಿವರಿಸಿಲ್ಲ.

‘ಹೀಗಿದ್ದರೂ, ಕೆಲಸ ಹೇಗೆ ಮಾಡಬೇಕು ಎಂದು ಮಾಧ್ಯಮಗಳಿಗೆ ಬೋಧಿಸಲು ಸರ್ಕಾರ ಹಾಗೂ ಸೇನೆಗೆ ಅದೆಂತಹ ಧೈರ್ಯ? ಗೌರವಾನ್ವಿತ ಪತ್ರಕರ್ತರೊಬ್ಬರನ್ನು  ಅಪರಾಧಿಯಂತೆ ಬಿಂಬಿಸಲು ಅದೆಷ್ಟು ಧೈರ್ಯ? ಪಾಕಿಸ್ತಾನದ ರಾಷ್ಟ್ರೀಯ ಹಿತಾಸಕ್ತಿ ಏನು ಎಂಬುದನ್ನು ತೀರ್ಮಾನಿಸಲು ತಮಗೆ ಹಕ್ಕು, ಸಾಮರ್ಥ್ಯ ಹಾಗೂ ಏಕಸ್ವಾಮ್ಯ ಇದೆ ಎಂದು ತೀರ್ಮಾನಿಸಲು ಸೇನೆ–ಸರ್ಕಾರಕ್ಕೆ ಅದೆಷ್ಟು ಧೈರ್ಯ’ ಎಂದು ‘ದಿ ನೇಷನ್’ ಪ್ರಶ್ನಿಸಿದೆ. ‘ಅಲ್ಮೇಡಾ ಬೆಂಬಲಕ್ಕೆ ನಿಲ್ಲಬೇಕು. ಅಲ್ಮೇಡಾ, ನಿಮಗೆ ಮತ್ತು ನಿಮ್ಮ ಲೇಖನಿಗೆ ಹೆಚ್ಚಿನ ಶಕ್ತಿ ಬರಲಿ. ಮಾಧ್ಯಮ ನಿಮ್ಮ ಜತೆ ನಿಲ್ಲುತ್ತದೆ’ ಎಂದು ಪತ್ರಿಕೆ ಹೇಳಿದೆ.

ವರದಿ ಸಮರ್ಥಿಸಿಕೊಂಡ ‘ಡಾನ್‌’

ಉಗ್ರರಿಗೆ ಬೆಂಬಲ ನೀಡುತ್ತಿರುವುದರ ಸಂಬಂಧ ಸರ್ಕಾರ ಮತ್ತು ಸೇನಾ ನಾಯಕತ್ವದ ನಡುವೆ ತಿಕ್ಕಾಟ ಉಂಟಾಗಿದೆ ಎಂಬ ವರದಿಯು ಪಟ್ಟಭದ್ರ ಹಿತಾಸಕ್ತಿಯ ಮತ್ತು ಸುಳ್ಳು ಮಾಹಿತಿಯಿಂದ ಕೂಡಿದೆ ಎನ್ನುವ ಆರೋಪವನ್ನು ಡಾನ್‌ ಪತ್ರಿಕೆ ಬುಧವಾರ ತಳ್ಳಿಹಾಕಿದೆ.

ಸರ್ಕಾರದ ಪ್ರತಿನಿಧಿಗಳು ಮತ್ತು ಸೇನಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಇದರ ಕಾವು ದೇಶದಾದ್ಯಂತ ವ್ಯಾಪಿಸಿದೆ ಎಂಬ ವರದಿಯನ್ನು ಸಮರ್ಪಕವಾಗಿ ಪರಿಶೀಲಿಸಲಾಗಿದೆ. ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ಸರಿಯಾಗಿಯೇ ಇದೆ ಎಂದು ಪತ್ರಿಕೆ ತನ್ನ ಸಂಪಾದಕೀಯದಲ್ಲಿ  ಸಮರ್ಥಿಸಿಕೊಂಡಿದೆ.

ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಬೇಹುಗಾರಿಕಾ ಅಧಿಕಾರಿಗಳ ನಡುವೆ ನಡೆದ ಗೋಪ್ಯ ಸಭೆಯ ವಿವರಗಳನ್ನು ಅಧಿಕೃತ ಮಾಹಿತಿ ಸಂಗ್ರಹಿಸಿಯೇ ಪ್ರಕಟಿಸಲಾಗಿದೆ ಎಂದು ಅದು ಹೇಳಿದೆ.

ಈ ವರದಿ ಬರೆದ ಸಿರಿಲ್‌ ಅಲ್ಮೇಡಾ ಅವರು ದೇಶ ಬಿಟ್ಟು ಹೋಗಬಾರದು ಎಂದು ಪಾಕಿಸ್ತಾನ ಸರ್ಕಾರ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.