ADVERTISEMENT

ಮಹಿಳೆಯರಿಂದ ಭ್ರಷ್ಟಾಚಾರಕ್ಕೆ ಕಡಿವಾಣ

ರಾಜಕೀಯದಲ್ಲಿ ಪ್ರಾತಿನಿಧ್ಯ ನೀಡಲು ಸಲಹೆ

ಪಿಟಿಐ
Published 17 ಜೂನ್ 2018, 16:44 IST
Last Updated 17 ಜೂನ್ 2018, 16:44 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ವಾಷಿಂಗ್ಟನ್‌: ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಜನಪ್ರತಿನಿಧಿಗಳಾಗಿ ಆಯ್ಕೆಯಾದರೆ ಸರ್ಕಾರಿ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎಂದು ಅಧ್ಯಯನ ವರದಿವೊಂದು ತಿಳಿಸಿದೆ.

125 ದೇಶಗಳಲ್ಲಿ ಮಾಹಿತಿಯನ್ನು ವಿಶ್ಲೇಷಣೆ ಮಾಡಿ ಈ ವರದಿ ಸಿದ್ಧಪಡಿಸಲಾಗಿದೆ. ಸ್ಥಳೀಯ ಮಟ್ಟದ ರಾಜಕೀಯದಲ್ಲೂ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವುದು ಸಹ ಮುಖ್ಯವಾಗಿದೆ. ಯುರೋಪ್‌ ರಾಷ್ಟ್ರಗಳಲ್ಲಿ ಸ್ಥಳೀಯ ರಾಜಕೀಯದಲ್ಲಿ ಹೆಚ್ಚು ಪ್ರಾತಿನಿಧ್ಯ ನೀಡಿರುವ ಪ್ರದೇಶಗಳಲ್ಲಿ ಭ್ರಷ್ಟಾಚಾರ ಕಡಿಮೆ ಇದೆ ಎಂದು ವರದಿ ವಿಶ್ಲೇಷಿಸಿದೆ.

‘ಈ ಅಧ್ಯಯನವು ಮಹಿಳಾ ಸಬಲೀಕರಣದ ಮಹತ್ವದ ಬಗ್ಗೆ ತಿಳಿಸುತ್ತದೆ. ಮಹಿಳೆಯರ ನಾಯಕತ್ವ ಮತ್ತು ಸರ್ಕಾರದಲ್ಲಿ ದೊರೆಯುವ ಪ್ರಾತಿನಿಧ್ಯ ಮತ್ತು ಅವರು ವಹಿಸುವ ಪಾತ್ರದ ಬಗ್ಗೆ ಇದು ವಿವರಿಸುತ್ತದೆ. ಬಹುತೇಕ ದೇಶಗಳ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಕಡಿಮೆ ಪ್ರಾತಿನಿಧ್ಯ ನೀಡಲಾಗುತ್ತಿದೆ. ಹೀಗಿರುವಾಗ, ಮಹಿಳೆಯರ ಸ್ಥಿತಿಗತಿ ಬಗ್ಗೆ ಗಂಭೀರ ಚಿಂತನೆ ಅಗತ್ಯ’ ಎಂದು ಅಮೆರಿಕದ ಅರ್ಥಶಾಸ್ತ್ರ ಪ್ರಾಧ್ಯಾಪಕ ಸುದೀಪ್ತ ಸಾರಂಗಿ ತಿಳಿಸಿದ್ದಾರೆ.

ADVERTISEMENT

‘ಪುರುಷರಿಗಿಂತ ವಿಭಿನ್ನವಾದ ನೀತಿಗಳನ್ನು ಮಹಿಳಾ ನೀತಿ ನಿರೂಪಕರು ರೂಪಿಸುವುದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ’ ಎಂದು ಅಧ್ಯಯನ ತಂಡದಲ್ಲಿದ್ದ ಅಮೆರಿಕದ ಲೆ ಮೊಯ್ನೆ ಕಾಲೇಜಿನ ಚಂದನ್‌ ಝಾ ತಿಳಿಸಿದ್ದಾರೆ.

’ಆರ್ಥಿಕ, ಸಾಂಸ್ಕೃತಿಕ ಮತ್ತು ಸಾಂಸ್ಥಿಕ ಅಂಶಗಳು ಸಹ ರಾಜಕೀಯ ವ್ಯವಸ್ಥೆಯಲ್ಲಿ ಪ್ರಮುಖವಾಗುತ್ತವೆ. ಪುರುಷರ ಭ್ರಷ್ಟಾಚಾರದ ಬಗ್ಗೆಯೂ ಈ ಮೊದಲು ಹಲವು ಅಧ್ಯಯನ ವರದಿಗಳು ಪ್ರಕಟವಾಗಿವೆ. ಆದರೆ, ಈ ವರದಿಗಳು ಸರ್ಕಾರದಲ್ಲಿ ಮಹಿಳೆಯರ ಪ್ರಾತಿನಿಧ್ಯ ಮತ್ತು ಭ್ರಷ್ಟಾಚಾರದ ಅಂಶಗಳ ಬಗ್ಗೆ ವಿಮರ್ಶೆ ಮಾಡಿಲ್ಲ’ ಎಂದು ಅಧ್ಯಯನ ನಡೆಸಿದ ತಂಡದ ಸದಸ್ಯರು ತಿಳಿಸಿದ್ದಾರೆ.

’ಈಗಿನ ವರದಿಯು ಸಮಗ್ರವಾಗಿದೆ. ಕಾರ್ಮಿಕರಾಗಿ ದುಡಿಯುವವರು, ಕ್ಲರ್ಕ್‌ ಹುದ್ದೆಗಳಲ್ಲಿರುವವರು ಮತ್ತು ನಿರ್ಧಾರ ಕೈಗೊಳ್ಳುವಂತಹ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗಳು ಸೇರಿದಂತೆ ವಿವಿಧ ವೃತ್ತಿಗಳಲ್ಲಿಯೂ ಮಹಿಳೆಯರ ಕಾರ್ಯನಿರ್ವಹಣೆಯಿಂದ ಬೀರಿರುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ಈ ವೃತ್ತಿಗಳಲ್ಲಿರುವವರಿಗೆ ಭ್ರಷ್ಟಾಚಾರ ಹೆಚ್ಚು ಸಂಬಂಧಪಡುವುದಿಲ್ಲ. ಆದರೆ, ನೀತಿಗಳನ್ನು ರೂಪಿಸುವಲ್ಲಿ ವಹಿಸುವ ಪಾತ್ರದಿಂದ ಭ್ರಷ್ಟಾಚಾರದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಏಕೆಂದರೆ, ಮಹಿಳೆಯರಿಗೆ ಉನ್ನತ ಸ್ಥಾನಮಾನ ದೊರೆತಂತೆ ಭ್ರಷ್ಟಾಚಾರದ ಬೇರುಗಳ ಬಗ್ಗೆಯೂ ಗೊತ್ತಾಗುತ್ತದೆ’ ಎಂದು ತಿಳಿಸಿದ್ದಾರೆ.

ಮಹಿಳಾ ಕಲ್ಯಾಣ ನೀತಿಗಳ ಆಯ್ಕೆ
ಮಹಿಳೆಯರ ಕಲ್ಯಾಣ, ಮಕ್ಕಳು ಮತ್ತು ಕುಟುಂಬದ ಬಗ್ಗೆಯೇ ಸಂಬಂಧಪಡುವ ಹೆಚ್ಚು ನೀತಿಗಳನ್ನು ಮಹಿಳಾ ರಾಜಕಾರಣಿಗಳು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಅಧ್ಯಯನ ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.