ಇಸ್ಲಾಮಾಬಾದ್ (ಪಿಟಿಐ): ಮುಂಬೈ ದಾಳಿಯಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಲಷ್ಕರ್-ಎ-ತೈಯ್ಯಬಾದ ಕಮಾಂಡರ್ ಝಾಕಿ-ಉರ್- ರೆಹಮಾನ್ ಲಖ್ವಿ ಸೇರಿದಂತೆ ಏಳು ಆರೋಪಿಗಳನ್ನು ರಾವಲ್ಪಿಂಡಿ ನ್ಯಾಯಾಲಯದಿಂದ ಇಲ್ಲಿನ ಹೊಸ ಭಯೋತ್ಪಾದನಾ ನಿಗ್ರಹ ನ್ಯಾಯಾಲಯಕ್ಕೆ ಸ್ಥಳಾಂತರಿಸಲಾಗಿದೆ.
ಇಸ್ಲಾಮಾಬಾದ್ ನ್ಯಾಯಾಲಯದ ನ್ಯಾಯಮೂರ್ತಿ ಕೌಸರ್ ಅಬ್ಬಾಸ್ ಜೈದಿ ಇರುವ ಭಯೋತ್ಪಾದನಾ ವಿರೋಧಿ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸಬೇಕೆಂದು ರಾವಲ್ಪಿಂಡಿಯ ನ್ಯಾಯಮೂರ್ತಿ ಚೌಧರಿ ಹಬೀಬ್-ಉರ್-ರೆಹಮಾನ್ ಅವರು ಸರ್ಕಾರಿ ವಕೀಲರಿಂದ ಅರ್ಜಿ ಪಡೆದ ನಂತರ ಈ ಸಂಬಂಧ ಆದೇಶ ಹೊರಡಿಸಿದರು.
ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಇತ್ತೀಚೆಗೆ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ವಿರುದ್ಧದ ಪ್ರಕರಣದ ವಿಚಾರಣೆಗಾಗಿ ಜೈದಿಯವರ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. ಅಲ್ಲಿಯವರೆಗೂ ಇಸ್ಲಾಮಾಬಾದ್ ಯಾವುದೇ ಭಯೋತ್ಪಾದನಾ ವಿರೋಧಿ ನ್ಯಾಯಾಲಯವನ್ನು ಹೊಂದಿರಲಿಲ್ಲ. ಎಲ್ಲಾ ಭಯೋತ್ಪಾದನಾ ಪ್ರಕರಣಗಳನ್ನು ರಾವಲ್ಪಿಂಡಿಯ ನ್ಯಾಯಾಲಯದಲ್ಲೇ ವಿಚಾರಣೆಗೆ ಒಳಪಡಿಸಲಾಗುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.