ADVERTISEMENT

ಮುಷರಫ್‌ಗೆ ಸಮನ್ಸ್

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 19:30 IST
Last Updated 24 ಫೆಬ್ರುವರಿ 2012, 19:30 IST

ಇಸ್ಲಾಮಾಬಾದ್ (ಪಿಟಿಐ): ಐದು ವರ್ಷಗಳ ಹಿಂದೆ ಕರಾಚಿಯಲ್ಲಿ ನಡೆದ ರಾಜಕೀಯ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಜನರಲ್ ಪರ್ವೇಜ್ ಮುಷರಫ್ ಅವರಿಗೆ ಸಿಂಧ್ ಹೈಕೋರ್ಟ್ ಶುಕ್ರವಾರ ಸಮನ್ಸ್ ಜಾರಿಗೊಳಿಸಿದೆ.

ಸಿಂಧ್ ಹೈಕೋರ್ಟ್‌ನ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದ್ದು, ಏಪ್ರಿಲ್ 7ರಂದು ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗುವಂತೆ ಮುಷರಫ್‌ಗೆ ಸೂಚಿಸಿದೆ. ಅಲ್ಲದೆ, ಸಮನ್ಸ್ ನೋಟಿಸ್‌ನ್ನು ಲಂಡನ್ ಪತ್ರಿಕೆಗಳಲ್ಲಿ ಮುದ್ರಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದೆ. ಈ ಪ್ರಕರಣದ ವಿಚಾರಣೆಯನ್ನು ಉನ್ನತ ಪೀಠಕ್ಕೆ ವಹಿಸುವಂತೆಯೂ ನ್ಯಾಯಪೀಠ ಶಿಫಾರಸು ಮಾಡಿದೆ.

ಮುಷರಫ್ ಪ್ರಸ್ತುತ ಲಂಡನ್ ಮತ್ತು ದುಬೈನಲ್ಲಿ ಭೂಗತ ಜೀವನ ಸಾಗಿಸುತ್ತಿದ್ದಾರೆ.
ಹಿನ್ನೆಲೆ: ಮುಷರಫ್ ಅವರಿಂದ ವಜಾಗೊಂಡಿದ್ದ ಪಾಕ್ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ಅವರು ವಕೀಲರು ಮತ್ತು ರಾಜಕೀಯ ಪಕ್ಷಗಳ ಬೆಂಬಲ ಗಳಿಸಲು ದೇಶದಾದ್ಯಂತ ಪ್ರವಾಸ ಕೈಗೊಂಡಿದ್ದಾಗ 2007ರ ಮೇ 12ರಂದು ಕರಾಚಿಯಲ್ಲಿ ಹಿಂಸಾಚಾರ ನಡೆದಿತ್ತು. ಸಭೆಯಲ್ಲಿ ಪಾಲ್ಗೊಳ್ಳಲು ಬರುತ್ತಿದ್ದ ಇಫ್ತಿಕಾರ್  ಬೆಂಬಲಿಗರು ಮತ್ತು ವಿರೋಧ ಪಕ್ಷಗಳ ಕಾರ್ಯಕರ್ತರ ಮೇಲೆ ಪೊಲೀಸರು ಬಲ ಪ್ರಯೋಗಿಸಿದಾಗ 50ಕ್ಕೂ ಹೆಚ್ಚು ಜನರು ಮೃತಪಟ್ಟು, ನೂರಾರು ಮಂದಿ ಗಾಯಗೊಂಡಿದ್ದರು.


ರೆಡ್ ಕಾರ್ನರ್ ನೋಟಿಸ್
ಮಾಜಿ ಪ್ರಧಾನಿ ಬೆನಜಿರ್ ಭುಟ್ಟೊ ಹತ್ಯೆಗೆ ಸಂಬಂಧಿಸಿದಂತೆ ಮುಷರಫ್ ಅವರನ್ನು ಇಂಟರ್‌ಪೋಲ್ ಮುಖಾಂತರ ದೇಶಕ್ಕೆ ವಾಪಸು ಕರೆಯಿಸಲಾಗುವುದು ಎಂದು ಪಾಕ್ ಆಂತರಿಕ ಭದ್ರತಾ ಸಚಿವ ರೆಹಮಾನ್ ಮಲಿಕ್ ಹೇಳಿಕೆ ನೀಡಿದ ಮೂರು ದಿನಗಳಲ್ಲೇ ಕೋರ್ಟ್‌ನ ಈ ಆದೇಶ ಹೊರಬಿದ್ದಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಬೆನಜಿರ್ ಅವರಿಗೆ ಸಾಕಷ್ಟು ಭದ್ರತೆ ಒದಗಿಸುವಲ್ಲಿ ಮುಷರಫ್ ವಿಫಲರಾಗಿದ್ದರು, ಆದ್ದರಿಂದ ಅವರ ಹತ್ಯೆಯಾಯಿತು. ಈ ಪ್ರಕರಣದಲ್ಲಿ ಲಂಡನ್‌ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯ ಮೂಲಕ ಹಲವು ಬಾರಿ ನೋಟಿಸ್ ಕಳುಹಿಸಿದ್ದರೂ ಮುಷರಫ್ ಅದಕ್ಕೆ ಪ್ರತಿಕ್ರಿಯಿಸಿಲ್ಲ. ಈಗ ಇಂಟರ್‌ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಕಳುಹಿಸಲಾಗುವುದು ಎಂದು ಮಲಿಕ್ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.