ಸೋಲ್ (ಡಿಪಿಎ): ಹೊಸದಾಗಿ ಅಣ್ವಸ್ತ್ರ ಪ್ರಯೋಗ ಮಾಡಲು ಉತ್ತರ ಕೊರಿಯಾ ಸುರಂಗವನ್ನು ತೋಡುತ್ತಿದೆ ಎಂದು ದಕ್ಷಿಣ ಕೊರಿಯಾ ಅಧಿಕಾರಿಗಳು ಆಪಾದಿಸಿದ್ದಾರೆ.
ಉತ್ತರಹಮ್ಗಿಯೊಂಗ್ ಪ್ರಾಂತ್ಯದ ಪರಮಾಣು ಘಟಕದ ಬಳಿ 2006 ಮತ್ತು 2009ರಲ್ಲಿ ಪ್ಲುಟೊನಿಯಂಯುಕ್ತ ಅಣ್ವಸ್ತ್ರ ಪರೀಕ್ಷೆ ನಡೆಸಿದ ಸ್ಥಳದ ಹತ್ತಿರದಲ್ಲೇ ಸುರಂಗವನ್ನು ತೋಡಲಾಗುತ್ತಿದೆ ಎಂದು ಯೊನ್‌ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಗುಪ್ತಚರ ಇಲಾಖೆಯ ಅಧಿಕಾರಿಗಳು ಉತ್ತರ ಕೊರಿಯಾದಲ್ಲಿ ಎರಡು ಹೊಸ ಸುರಂಗಗಳನ್ನು ತೋಡುತ್ತಿರುವುದನ್ನು ಪತ್ತೆಹಚ್ಚಿದ್ದು, ಮೂರನೇ ಅಣ್ವಸ್ತ್ರ ಪರೀಕ್ಷೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ವರದಿ ಮಾಡಿದ್ದಾರೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಉತ್ತರ ಕೊರಿಯಾ ಅಣ್ವಸ್ತ್ರ ಪರೀಕ್ಷೆ ಮಾಡುವ ಸಂದರ್ಭದಲ್ಲಿಯೇ ದೂರಗಾಮಿ ಅಣ್ವಸ್ತ್ರ ಸಿಡಿತಲೆಯ ಕ್ಷಿಪಣಿಯನ್ನೂ ಪರೀಕ್ಷೆ ಮಾಡಲಿದೆಯೇ ಎಂಬುದನ್ನು ಪತ್ತೆ ಹಚ್ಚಲು ದಕ್ಷಿಣ ಕೊರಿಯಾ ಸೇನಾ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.
ಚೀನಾದ ಗಡಿಯಲ್ಲಿ ಪಶ್ಚಿಮ ಕಡಲ ತೀರದಲ್ಲಿ ಉತ್ತರ ಕೊರಿಯಾ ಈಗಾಗಲೇ ಕ್ಷಿಪಣಿ ಉಡಾವಣಾ ಸ್ಥಾವರ ನಿರ್ಮಾಣ ಕಾರ್ಯವನ್ನು ಪೂರ್ತಿಗೊಳಿಸಿದೆ.
1998, 2006 ಮತ್ತು 2009ರಲ್ಲಿ ಉತ್ತರ ಕೊರಿಯಾ ನಡೆಸಿದ ದೂರಗಾಮಿ ಕ್ಷಿಪಣಿ ಪರೀಕ್ಷೆಗಳು ಭಾಗಶಃ ಯಶಸ್ವಿಯಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.