ADVERTISEMENT

ಮೂವರು ಪಾಕಿಸ್ತಾನಿಯರಿಗೆ 96 ಮಕ್ಕಳು!

ಏಜೆನ್ಸೀಸ್
Published 10 ಜೂನ್ 2017, 19:30 IST
Last Updated 10 ಜೂನ್ 2017, 19:30 IST
ಮಕ್ಕಳ ಜತೆ ಗುಲ್ಜರ್‌ ಖಾನ್‌ (ಎಎಫ್‌ಪಿ ಚಿತ್ರ)
ಮಕ್ಕಳ ಜತೆ ಗುಲ್ಜರ್‌ ಖಾನ್‌ (ಎಎಫ್‌ಪಿ ಚಿತ್ರ)   

ಇಸ್ಲಾಮಾಬಾದ್: ಒಬ್ಬ ವ್ಯಕ್ತಿಗೆ ಹೆಚ್ಚೆಂದರೆ ಎಷ್ಟು ಮಕ್ಕಳಿರಬಹುದು? ಈ ಪ್ರಶ್ನೆಗೆ ಊಹೆಗೂ ನಿಲುಕದ ಉತ್ತರವೊಂದು ಪಾಕಿಸ್ತಾನದಲ್ಲಿ ದೊರೆತಿದೆ.

ಪಾಕಿಸ್ತಾನದ ಮೂವರು ವ್ಯಕ್ತಿಗಳು ಒಟ್ಟು 96 ಮಕ್ಕಳನ್ನು ಹೊಂದುವ ಮೂಲಕ ಗಮನ ಸೆಳೆದಿದ್ದಾರೆ. 19 ವರ್ಷಗಳ ಬಳಿಕ ಪಾಕಿಸ್ತಾನ ಜನಗಣತಿಗೆ ಮುಂದಾಗಿರುವ ಸಂದರ್ಭದಲ್ಲಿ ಇಂಥದ್ದೊಂದು ಅಚ್ಚರಿಯ ಸುದ್ದಿ ಬೆಳಕಿಗೆ ಬಂದಿದೆ. ಇಷ್ಟೊಂದು ಮಕ್ಕಳನ್ನು ಹೊಂದಿರುವ ಮೂವರೂ ಪುರುಷರು, ಮಕ್ಕಳನ್ನೆಲ್ಲ ದೇವರು ಸಲಹುತ್ತಾನೆ ಎಂದು ಬಲವಾಗಿ ನಂಬಿದ್ದಾರೆ.

ಪಾಕಿಸ್ತಾನದ ದಕ್ಷಿಣ ಖೈಬರ್ ಪಖ್ತುಂಖ್ವಾದ ಬನ್ನೂ ನಗರದ ಸಮೀಪದ ನಿವಾಸಿಯಾಗಿರುವ 57 ವರ್ಷ ವಯಸ್ಸಿನ ಗುಲ್ಜರ್ ಖಾನ್ ಎಂಬುವರು 36 ಮಕ್ಕಳ ತಂದೆ. ಗುಲ್ಜರ್ ಖಾನ್ ಅವರ 15 ಸಹೋದರರ ಪೈಕಿ ಒಬ್ಬರು ಮಸ್ತಾನ್ ಖಾನ್ ವಜೀರ್. ಇವರು 22 ಮಕ್ಕಳ ತಂದೆಯಾಗಿದ್ದು ಮೂವರು ಪತ್ನಿಯರನ್ನು ಹೊಂದಿದ್ದಾರೆ.

ADVERTISEMENT

ಇನ್ನು ಮೂರನೇಯವರು ಬಲೂಚಿಸ್ತಾನದ ನೈರುತ್ಯ ಕ್ವೆಟ್ಟಾ ನಗರದ ಜಾನ್ ಮೊಹಮ್ಮದ್ ಎಂಬುವರು. ಇವರಿಗೆ 38 ಮಕ್ಕಳಿದ್ದಾರೆ. ‘ಬದುಕಲು ಬೇಕಾಗಿರುವ ಆಹಾರ ಮತ್ತು ಸಂಪನ್ಮೂಲಗಳನ್ನು ಒದಗಿಸುವುದಾಗಿ ದೇವರೇ ಹೇಳಿದ್ದಾರೆ. ಆದರೆ, ಜನರಿಗೆ ನಂಬಿಕೆ ಇಲ್ಲ’ ಎಂಬುದಾಗಿ ಎಎಫ್‌ಪಿ ಸುದ್ದಿ ಸಂಸ್ಥೆ ಜತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ ಮಸ್ತಾನ್ ಖಾನ್ ವಜೀರ್‌.

ಮೂವರು ಪತ್ನಿಯರನ್ನು ಹೊಂದಿರುವ ಇವರು ನಾಲ್ಕನೇ ಮದುವೆಯಾಗುವ ಬಯಕೆ ಹೊಂದಿರುವುದಾಗಿ ಎಎಫ್‌ಪಿಗೆ ತಿಳಿಸಿದ್ದಾರೆ. ‘ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಬೆಳವಣಿಗೆ ಹೊಂದಿದರೆ ಅವರ ಶತ್ರುಗಳು ಹೆದರುತ್ತಾರೆ. ಮುಸ್ಲಿಮರ ಸಂಖ್ಯೆ ಹೆಚ್ಚಾಗಬೇಕು’ ಎಂದು ಅವರು ಹೇಳಿದ್ದಾರೆ. ಜಾನ್ ಮೊಹಮ್ಮದ್ ಅವರು ಕುಟುಂಬ ನಿರ್ವಹಣೆಗೆ ನೆರವು ನೀಡಬೇಕೆಂದು ಸರ್ಕಾರಕ್ಕೆ ಮನವಿಯನ್ನೂ ಮಾಡಿದ್ದಾರೆ.

ವಿಶ್ವಬ್ಯಾಂಕ್ ಮತ್ತು ಸರ್ಕಾರದ ಅಂಕಿಅಂಶಗಳ ಪ್ರಕಾರ, ಪಾಕಿಸ್ತಾನವು ದಕ್ಷಿಣ ಏಷ್ಯಾದಲ್ಲೇ ಹೆಚ್ಚಿನ ಜನನ ಪ್ರಮಾಣ ಹೊಂದಿರುವ ದೇಶವಾಗಿದೆ.

ಕಳೆದ ಬಾರಿ 1998ರಲ್ಲಿ ಜನಗಣತಿ ನಡೆಸಲಾಗಿತ್ತು. ಆಗ ಪಾಕಿಸ್ತಾನದ ಜನಸಂಖ್ಯೆ 13.5 ಕೋಟಿಯಷ್ಟಿತ್ತು. ಈ ವರ್ಷ ಜನಗಣತಿ ನಡೆಸಲು ಉದ್ದೇಶಿಸಲಾಗಿದ್ದು, ಜನಸಂಖ್ಯೆ ಸುಮಾರು 20 ಕೋಟಿ ತಲುಪಿರಬಹುದು ಎಂದು ಅಂದಾಜಿಸಲಾಗಿದೆ. ಈ ಪೈಕಿ ಸುಮಾರು 6 ಕೋಟಿ ಜನ ಬಡತನ ರೇಖೆಗಿಂತ ಕೆಳಗಿದ್ದಾರೆ ಎನ್ನಲಾಗಿದೆ.

‘ಅತಿ ಹೆಚ್ಚಿನ ಜನಸಂಖ್ಯೆ ಒಂದು ಸಮಸ್ಯೆಯಾಗಿದ್ದು, ಅಭಿವೃದ್ಧಿ ಮೇಲೂ ಪರಿಣಾಮ ಬೀರುತ್ತಿದೆ’ ಎಂದು ವಿಶ್ವಸಂಸ್ಥೆಯ ಪಾಕಿಸ್ತಾನ ಘಟಕದ ನಿರ್ದೇಶಕ ಜೆಬಾ ಎ. ಸತ್ತಾರ್ ಅಭಿಪ್ರಾಯಪಟ್ಟಿದ್ದಾರೆ.

*
ಎಲ್ಲ ಮಾನವರಿಗಾಗಿ ದೇವರು ಈ ಜಗತ್ತನ್ನು ಸೃಷ್ಟಿಸಿದ್ದಾನೆ. ಹಾಗಿದ್ದಮೇಲೆ ನೈಸರ್ಗಿಕ ಪ್ರಕ್ರಿಯೆಯಾದ ಮಕ್ಕಳ ಜನನವನ್ನು ನಾವ್ಯಾಕೆ ತಡೆಯಬೇಕು.
-ಗುಲ್ಜರ್ ಖಾನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.