ADVERTISEMENT

`ಮೋದಿಯಿಂದ ನ್ಯಾಯ ಸಿಗದು'

ಅಮೆರಿಕ ಸಂಸತ್‌ನಲ್ಲಿ ದುಗುಡ ವ್ಯಕ್ತಪಡಿಸಿದ ಜಾಕಿಯಾ ಜಾಫ್ರಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 19:39 IST
Last Updated 5 ಡಿಸೆಂಬರ್ 2012, 19:39 IST

ವಾಷಿಂಗ್ಟನ್ (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಭಾರತದ ಪ್ರಧಾನಿಯಾದರೆ ಅವರಿಂದ  ಗುಜರಾತ್ ಗಲಭೆ ಸಂತ್ರಸ್ತರಿಗೆ ನ್ಯಾಯ ದೊರಕುವುದಿಲ್ಲ ಎಂದು ಗೋಧ್ರಾ ನಂತರದ ಗಲಭೆಯಲ್ಲಿ ಹತ್ಯೆಯಾದ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಪತ್ನಿ ಜಾಕಿಯಾ ಜಾಫ್ರಿ ಹೇಳಿದ್ದಾರೆ.
ಜೊತೆಗೆ, ಮೋದಿ ಅವರ ವೀಸಾ ನೀಡಿಕೆಗೆ ವಿಧಿಸಿರುವ ತಡೆಯಾಜ್ಞೆಯನ್ನು ಅಮೆರಿಕ ಮುಂದುವರಿಸಬೇಕು ಎಂದು ಒಬಾಮ ಆಡಳಿತ ಮತ್ತು ಇಲ್ಲಿನ ಸಂಸದರನ್ನು ಕೋರಿದ್ದಾರೆ.

`ಅವರೇನಾದರು  ಪ್ರಧಾನಿಯಾದರೆ ನಾನೂ ಸೇರಿದಂತೆ ಗಲಭೆಯ ಸಾವಿರಾರು ಸಂತ್ರಸ್ತರು ನ್ಯಾಯ ಸಿಗುವ ಭರವಸೆಯನ್ನು ಕಳೆದುಕೊಳ್ಳುತ್ತೇವೆ. ಆದ್ದರಿಂದ ಮೋದಿ ಭಾರತದ ಪ್ರಧಾನಿ ಆಗದಿರಲಿ ಎಂಬುದೇ ನನ್ನ ಪ್ರಾರ್ಥನೆ' ಎಂದು ಜಾಕಿಯಾ ಅವರು `ಕ್ಯಾಪಿಟಲ್ ಹಿಲ್'ನಲ್ಲಿ (ಅಮೆರಿಕ ಸಂಸತ್ ಭವನ) ಮಂಗಳವಾರ ಹೇಳಿದ್ದಾರೆ.

`ನೀವು ಮೋದಿ ಅವರನ್ನು ದೂರ ಇರಿಸಿರುವುದು ಸರಿಯಾಗಿಯೇ ಇದೆ. ಇದು ನ್ಯಾಯ ನಿರೀಕ್ಷೆಯಲ್ಲಿರುವ ನನ್ನ ಭರವಸೆಯನ್ನು ಜೀವಂತವಾಗಿ ಇರಿಸಿದೆ' ಎಂಬ ಜಾಕಿಯಾ ಹೇಳಿಕೆಯನ್ನು ಅವರ ಅಳಿಯ ನಜೀದ್ ಹುಸೇನ್ ಅಮೆರಿಕ ಕಾಂಗ್ರೆಸ್‌ನಲ್ಲಿ ಓದಿದರು. ಆ ಸಮಯದಲ್ಲಿ ಜಾಕಿಯಾ ಅವರು ಅಳಿಯನ ಪಕ್ಕದಲ್ಲೇ ನಿಂತಿದ್ದರು.

`ನನ್ನ ಪತಿ ಹತ್ಯೆಗೆ ಮೋದಿ ಅವರೇ ಕಾರಣ ಎಂದು ನನ್ನ ಅಂತರಾತ್ಮಕ್ಕೆ ತಿಳಿದಿದೆ. ಪ್ರಾಣಾಪಾಯದಲ್ಲಿದ್ದ ಸಂದರ್ಭದಲ್ಲಿ ಅವರು ಸಹಾಯ ಯಾಚಿಸಿದರು. ಆದರೆ, ಹಲ್ಲೆಕೋರರು “ಜಾಫ್ರಿ ಈಗ ನೀನು ಏಕಾಂಗಿ. ಸಾಧ್ಯವಿದ್ದರೆ ಪ್ರಾಣ ಉಳಿಸಿಕೋ” ಎಂದು ಹಂಗಿಸಿದರು' ಎಂದು ಜಾಕಿಯಾ ಹೇಳಿದ್ದಾರೆ.
ತಮ್ಮ ಪತಿಯ ಕೊನೆ ಕ್ಷಣಗಳನ್ನು ನೆನೆಸಿಕೊಂಡು ವ್ಯಾಕುಲರಾಗಿದ್ದಾರೆ.

`ಭಾರತದಲ್ಲಿ ನ್ಯಾಯದಾನ ನಿಧಾನವಿರಬಹುದು, ಆದರೆ ನ್ಯಾಯಾಂಗ ವ್ಯವಸ್ಥೆ ಬಲಿಷ್ಠವಾಗಿದೆ. ಈ ಪ್ರಕರಣದಲ್ಲಿ ನ್ಯಾಯದಾನ ಪ್ರಕ್ರಿಯೆ ಸರಾಗವಾಗಿ ಸಾಗಬೇಕಿದ್ದರೆ ಮೊದಲು ಮೋದಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತೊಗೆಯಬೇಕು' ಎಂದೂ ಅವರು ಹೇಳಿದ್ದಾರೆ.ಗುಜರಾತ್ ಗಲಭೆಯ ಸಂತ್ರಸ್ತರ ಪರವಾಗಿ ಜಾಕಿಯಾ ಮತ್ತು ಅಮೆರಿಕ ಪೌರತ್ವ ಪಡೆದಿರುವ ಜಾಕಿಯಾ ಅವರ ಪುತ್ರಿ ನಿಶ್ರಿನ್ ಹುಸೇನ್ ಹಾಗೂ ಹತ್ಯಾಕಾಂಡ ವಿರೋಧಿ ಒಕ್ಕೂಟದ ಸದಸ್ಯರು ಮಾತನಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.