ADVERTISEMENT

ಯಾರು ಹಿತವರು ಈ ನಾಲ್ವರೊಳಗೆ?

ಚುನಾವಣಾ ನಾಡಿನಿಂದ-3

ಸುಧೀಂದ್ರ ಬುಧ್ಯ
Published 6 ಅಕ್ಟೋಬರ್ 2016, 3:25 IST
Last Updated 6 ಅಕ್ಟೋಬರ್ 2016, 3:25 IST
ಯಾರು ಹಿತವರು ಈ ನಾಲ್ವರೊಳಗೆ?
ಯಾರು ಹಿತವರು ಈ ನಾಲ್ವರೊಳಗೆ?   

ಸಾಮಾನ್ಯವಾಗಿ ಅಮೆರಿಕದ ಅಧ್ಯಕ್ಷೀಯ ಚುನಾವಣಾ ಪ್ರಕ್ರಿಯೆ ಎರಡು ವರ್ಷಗಳಿಗೆ ಮೊದಲೇ ಆರಂಭವಾಗುತ್ತದೆ. ಮೊದಲಿಗೆ ಮುಂದಿನ ಚುನಾವಣೆಗೆ ಯಾವ ಪಕ್ಷದಿಂದ, ಯಾರು ಅಭ್ಯರ್ಥಿ ಆಗಬಹುದು ಎಂಬ ಗುಸುಗುಸು ಆರಂಭವಾಗುತ್ತದೆ. ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ರಾಜಕೀಯ ತಜ್ಞರು ಲೇಖನಗಳ ಮೂಲಕ, ಟಿ.ವಿ ಚರ್ಚೆಗಳ ಮೂಲಕ ಮುನ್ನಲೆಗೆ ಬಿಡುತ್ತಾರೆ.

ಮುಂದಿನ ಚುನಾವಣಾ ಪ್ರಚಾರ ಹೇಗಿರಬಹುದು, ಯಾವ ವಿಷಯಗಳಿಗೆ ಆದ್ಯತೆ ದೊರೆಯಬಹುದು ಎಂಬ ಬಗ್ಗೆ ಮಂಥನ ಆರಂಭವಾಗುತ್ತದೆ. ಅಧ್ಯಕ್ಷ ಪದವಿಗೇರುವ ಕನಸಿಗೆ ಕಾವು ಕೊಡುತ್ತಿರುವ ರಾಜಕಾರಣಿಗಳು, ರಾಜಕೀಯ ಸಲಹೆಗಾರರ ಒಂದು ಸಮಿತಿ ರಚಿಸಿಕೊಂಡು, ತಮ್ಮ ಜನಪ್ರಿಯತೆ ಅಳೆಯಲು ಮುಂದಾಗುತ್ತಾರೆ. ತಮ್ಮ ಬಗ್ಗೆ ಸ್ಥಳೀಯ ಸಂಸ್ಥೆಗಳ ಸದಸ್ಯರ ಅಭಿಪ್ರಾಯ ಏನಿದೆ ಎಂದು ತಿಳಿಯಲು ಸಮೀಕ್ಷೆ ನಡೆಸುತ್ತಾರೆ.

ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷದರಾಜಕಾರಣಿಗಳಷ್ಟೇ ಅಲ್ಲ, ಸ್ವತಂತ್ರವಾಗಿ ಸ್ಪರ್ಧಿಸುವ ಟೀಪಾರ್ಟಿ, ಗ್ರೀನ್ ಪಾರ್ಟಿಯಂತಹ ಸಣ್ಣಪುಟ್ಟ ಪಕ್ಷಗಳಿಂದ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳೂ ತಮ್ಮ ಬಗ್ಗೆ ಸಮೀಕ್ಷೆ ಮಾಡಿಸುತ್ತಾರೆ. ಅಲ್ಲಿಂದಲೇ ಚುನಾವಣೆಗೆ ಸಿದ್ಧತೆ ಆರಂಭವಾಗುತ್ತದೆ.

ಈ ಬಾರಿಯ ಚುನಾವಣೆಯಲ್ಲಿ, ಅಧ್ಯಕ್ಷ ಸ್ಥಾನಕ್ಕೆ ಮುಖ್ಯವಾಗಿ ನಾಲ್ಕು ಮಂದಿ ಕಣದಲ್ಲಿದ್ದಾರೆ. ಡೆಮಾಕ್ರಟಿಕ್ ಪಕ್ಷದಿಂದ ಹಿಲರಿ ಕ್ಲಿಂಟನ್, ರಿಪಬ್ಲಿಕನ್ ಪಕ್ಷದಿಂದ ಡೊನಾಲ್ಡ್ ಟ್ರಂಪ್, ಲಿಬರ್ಟೇರಿಯನ್ ಪಕ್ಷದಿಂದ ಗ್ಯಾರಿ ಜಾನ್ಸನ್, ಗ್ರೀನ್ ಪಾರ್ಟಿಯ ಜಿಲ್‌ ಸ್ಟೇನ್‌ ಪ್ರಮುಖರು.  ಈ ನಾಲ್ವರನ್ನಷ್ಟೇ ರಾಷ್ಟ್ರೀಯ ಮಟ್ಟದ ಸಮೀಕ್ಷೆಗಳಲ್ಲಿ ಪ್ರತಿಸ್ಪರ್ಧಿಗಳನ್ನಾಗಿ ಪರಿಗಣಿಸಲಾಗಿದೆ. ಉಳಿದಂತೆ ಕಣದಲ್ಲಿರುವ ಪಕ್ಷೇತರ ಅಭ್ಯರ್ಥಿಗಳು ಕೆಲವು ರಾಜ್ಯಗಳ ಮಟ್ಟಿಗಷ್ಟೇ ಸೀಮಿತವಾಗಿದ್ದಾರೆ.

ಈ ನಾಲ್ವರ ಪೈಕಿ ಇಬ್ಬರಿಗೆ ರಾಜಕೀಯ ಹಿನ್ನೆಲೆ ಇದೆ, ಆಡಳಿತದ ಅನುಭವ ಇದೆ. ಇನ್ನಿಬ್ಬರು ಇತರ ಕ್ಷೇತ್ರಗಳಿಂದ ರಾಜಕಾರಣಕ್ಕೆ ಬಂದವರು. ಹಿಲರಿ ಕ್ಲಿಂಟನ್ ಈ ಹಿಂದೆ ಸೆನೆಟರ್ ಆಗಿ, ಬರಾಕ್ ಒಬಾಮ ಅವರ ಮೊದಲ ಅವಧಿಯಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿ ಕೆಲಸ ಮಾಡಿದವರು.

ತಮ್ಮ ಪತಿ ಬಿಲ್‌ ಕ್ಲಿಂಟನ್ ಅಮೆರಿಕದ ಅಧ್ಯಕ್ಷರಾಗಿದ್ದಾಗ, ಶ್ವೇತಭವನದ ಒಡತಿಯಾಗಿ, ಅಲ್ಲಿನ ಕಾರ್ಯ ವೈಖರಿಯನ್ನು ಹತ್ತಿರದಿಂದ ಗಮನಿಸಿದವರು. ಆ ಮುಂಚೆಯೂ ವಿವಿಧ ಸಂಘ–ಸಂಸ್ಥೆಗಳ ಮೂಲಕ ಹಿಲರಿ ಸಾರ್ವಜನಿಕ ಜೀವನದಲ್ಲಿದ್ದರು.

ಲಿಬರ್ಟೇರಿಯನ್‌ ಪಕ್ಷದ ಗ್ಯಾರಿ ಜಾನ್ಸನ್, ಸುಮಾರು ಎಂಟು ವರ್ಷ ನ್ಯೂ ಮೆಕ್ಸಿಕೊ ರಾಜ್ಯದ ಗವರ್ನರ್ ಆಗಿ ಆಡಳಿತ ನಡೆಸಿದವರು. ಜಿಲ್‌ ಸ್ಟೇನ್ ಅವರು ವೈದ್ಯ ವೃತ್ತಿಯಿಂದ ಸಾರ್ವಜನಿಕ ಕ್ಷೇತ್ರಕ್ಕೆ ಧುಮುಕಿದವರು, ಗ್ರೀನ್ ಪಾರ್ಟಿಯ ಅಭ್ಯರ್ಥಿಯಾದವರು. ಜಿಲ್‌ ಮತ್ತು ಗ್ಯಾರಿ ಕಳೆದ ಚುನಾವಣೆಯಲ್ಲೂ ಸ್ಪರ್ಧಿಸಿ ಸೋತಿದ್ದರು.

ಈ ಬಾರಿಯೂ ಸ್ಪರ್ಧಿಸಿದ್ದಾರೆ. ಈ ಇಬ್ಬರ ಬಗ್ಗೆ ಬಹುತೇಕ ಮತದಾರರಿಗೆ ಮಾಹಿತಿ ಇರುವುದು ಅನುಮಾನ. ಅಮೆರಿಕದ ಚುನಾವಣೆಯನ್ನು ಹೊರಗಿನಿಂದ ಗಮನಿಸುವವರೂ ಮೂರನೇ ಪಕ್ಷದ ಅಭ್ಯರ್ಥಿಗಳ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಉಳಿದಂತೆ, ಈ ಬಾರಿ ಹೆಚ್ಚು ಕುತೂಹಲ ಮೂಡಿಸಿರುವ, ತಮ್ಮ ಹಗುರ ಮಾತುಗಳಿಂದ ಮತದಾರರಲ್ಲಿ ರೇಜಿಗೆ ಹುಟ್ಟಿಸಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್, ಒಬ್ಬ ಉದ್ಯಮಿಯಾಗಿ, ರಿಯಾಲಿಟಿ ಷೋ ಒಂದರ ನಿರೂಪಕರಾಗಿ ಹೆಸರು ಮಾಡಿದವರು. ದಿಢೀರನೆ ರಾಜಕೀಯಕ್ಕೆ ಬಂದವರು.

ಈ ನಾಲ್ವರ ಪೈಕಿ ಈಗ ನಿಜಕ್ಕೂ ಸ್ಪರ್ಧೆ ಇರುವುದು ಹಿಲರಿ ಮತ್ತು ಟ್ರಂಪ್ ನಡುವೆ ಮಾತ್ರ. ಅದು ಈ ಇಬ್ಬರು ಅಧ್ಯಕ್ಷ ಸ್ಥಾನಕ್ಕೆ ಅರ್ಹರು ಎಂಬ ದೃಷ್ಟಿಯಿಂದಲ್ಲ. ಅಮೆರಿಕದ ರಾಜಕೀಯ ವ್ಯವಸ್ಥೆ ಇರುವುದೇ ಹಾಗೆ. ಕಳೆದ ನೂರೈವತ್ತು ವರ್ಷಗಳಿಂದ, ಅಮೆರಿಕದ ಚುನಾವಣಾ ಕದನ, ಕೇವಲ ಎರಡು ಪಕ್ಷಗಳ ನಡುವಿನ ಹೋರಾಟವಾಗಿ ಬದಲಾಗಿದೆ.

1856ರಿಂದ ಮೊದಲ್ಗೊಂಡು ಇದುವರೆಗೆ ಅಮೆರಿಕದ ಅಧ್ಯಕ್ಷರಾದವರು ಡೆಮಾಕ್ರಟಿಕ್ ಅಥವಾ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳು ಮಾತ್ರ. ಆದರೆ ಮೂರನೇ ಪಕ್ಷದ ಅಥವಾ ಸ್ವತಂತ್ರ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲದಿದ್ದರೂ ನಿರ್ಣಾಯಕ ಮತಗಳನ್ನು ಕಸಿದು, ಸೋಲು ಗೆಲುವಿನ ಲೆಕ್ಕಾಚಾರ ಬದಲಿಸುವಷ್ಟರಮಟ್ಟಿಗೆ ಪ್ರಭಾವ ಉಂಟುಮಾಡುತ್ತಾರೆ.

ಅದಕ್ಕೆ ಉದಾಹರಣೆಯೆಂದರೆ 1912ರಲ್ಲಿ ಟೆಡ್ಡಿ ರೂಸ್ವೆಲ್ಟ್, ಸ್ವತಂತ್ರವಾಗಿ ಸ್ಪರ್ಧಿಸಿ ಶೇಕಡ 27ರಷ್ಟು ಮತ ಕಬಳಿಸಿಬಿಟ್ಟಿದ್ದರು. ಅದರಲ್ಲಿ ಹೆಚ್ಚಿನವು ರಿಪಬ್ಲಿಕನ್ ಪಕ್ಷದ ಮತಗಳು. ಹಾಗಾಗಿ ರಿಪಬ್ಲಿಕನ್ ಅಭ್ಯರ್ಥಿ ಹೋವರ್ಡ್ ಟಾಫ್ಟ್ ಸೋತು, ಡೆಮಾಕ್ರಟಿಕ್ ಪಕ್ಷದ ವುಡ್ವರ್ಡ್ ವಿಲ್ಸನ್ ಜಯಶಾಲಿಯಾಗಿದ್ದರು. 1992ರಲ್ಲಿ ರಿಫಾರ್ಮ್ ಪಾರ್ಟಿ ಬ್ಯಾನರ್ ಅಡಿ ಸ್ಪರ್ಧಿಸಿದ್ದ ರೋಸ್ಪೆರೋಟ್, ಶೇಕಡ 20ರಷ್ಟು ಮತ ಗಳಿಸಿ ಸಮೀಕ್ಷೆಗಳ ಸೋಲು–ಗೆಲುವಿನ ಲೆಕ್ಕ ತಲೆಕೆಳಗಾಗುವಂತೆ ಮಾಡಿದ್ದರು.

2000ನೇ ಇಸವಿಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಅಲ್ ಗೋರ್ ಗೆಲುವನ್ನು, ಗ್ರೀನ್ ಪಾರ್ಟಿಯಿಂದ ಸ್ಪರ್ಧಿಸಿದ್ದ ರಾಲ್ಫ್ ನಾಡರ್ ತಪ್ಪಿಸಿದ್ದರು. ಹಾಗಾಗಿ, ಮೂರನೇ ಪಕ್ಷದಿಂದ ಸ್ಪರ್ಧಿಸುವ ಅಥವಾ ಸ್ವತಂತ್ರವಾಗಿ ಕಣಕ್ಕಿಳಿಯುವ ಅಭ್ಯರ್ಥಿಗಳನ್ನು ‘Spoilers' ಎಂದೇ ಕರೆಯಲಾಗುತ್ತದೆ.

ಕೆಲವೊಮ್ಮೆ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಅಭ್ಯರ್ಥಿಗಳು ಚುನಾವಣಾ ತಂತ್ರವಾಗಿ, ಗೆಲುವಿಗೆ ರಹದಾರಿ ಮಾಡಿಕೊಳ್ಳಲು ಇಂತಹ ಮೂರನೇ ಅಭ್ಯರ್ಥಿಗಳಿಗೆ ಆರ್ಥಿಕ ಶಕ್ತಿ ತುಂಬಿ, ಛೂಬಿಡುತ್ತಾರೆ ಎಂಬ ಆರೋಪವೂ ಇದೆ. ಆದರೆ ಈ ಬಾರಿ ಅಂತಹ ವಾತಾವರಣವೇನೂ ಇದ್ದಂತಿಲ್ಲ.

2008ರ ಚುನಾವಣೆಯಲ್ಲಿ ಒಬಾಮ, ಅಮೆರಿಕದ ರಾಜಕೀಯದಲ್ಲಿ ಹೊಸ ಸಂಚಲನ ಉಂಟುಮಾಡಿದ್ದರು. ‘Yes, We Can' ಘೋಷಣೆ ಎಲ್ಲೆಡೆಯೂ ಪ್ರತಿಧ್ವನಿಸಿತ್ತು. ಮೊಟ್ಟ ಮೊದಲ ಬಾರಿಗೆ ಕಪ್ಪು ಜನಾಂಗದ ವ್ಯಕ್ತಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿದ್ದು, ಅವರು ಅದರಲ್ಲಿ ಗೆದ್ದಿದ್ದು ಚುನಾವಣೆ ಐತಿಹಾಸಿಕ ಎನಿಸಿಕೊಳ್ಳಲು ಕಾರಣವಾಯಿತು.

2012ರ ಚುನಾವಣೆಯಲ್ಲಿ ಒಬಾಮ ಪುನರಾಯ್ಕೆ ಬಯಸಿ ಸ್ಪರ್ಧಿಸಿದರು. ಒಬಾಮ ಜನಪ್ರಿಯತೆ ಮುಕ್ಕಾಗಿರಲಿಲ್ಲ, ‘ಮಾಡುವುದು ಸಾಕಷ್ಟಿದೆ’ ಎನ್ನುತ್ತಲೇ ಗೆದ್ದುಬಿಟ್ಟರು.ರಾಮ್ನಿ ಪ್ರಬಲ ಸ್ಪರ್ಧೆ ಒಡ್ಡದೇ, ಚುನಾವಣೆ ನೀರಸವಾಗಿ ಮುಗಿಯಿತು.

ಈ ಬಾರಿ ಹಿಲರಿ ಸ್ಪರ್ಧೆಯಲ್ಲಿದ್ದಾರೆ. ಅವರು ಗೆದ್ದರೆ, ಮೊದಲ ಅಧ್ಯಕ್ಷೆ ಎನಿಸಿಕೊಳ್ಳುವುದರಿಂದ ಇದೂ ಐತಿಹಾಸಿಕ ಚುನಾವಣೆಯೇ ಆಗುತ್ತದೆ. ಆದರೆ ಚುನಾವಣೆಯಲ್ಲಿ ಹುರುಪು ಕಾಣುತ್ತಿಲ್ಲ. ಹಿಲರಿ ಯುವಜನರನ್ನು ಸೆಳೆಯುವಲ್ಲಿ ಸೋಲುತ್ತಿದ್ದಾರೆ. ಟ್ರಂಪ್ ಕಣದಲ್ಲಿರುವುದರಿಂದ ಮತದಾರರ ಕುತೂಹಲ ಉಳಿದಿದೆ.

‘I am with Her, Stronger Together' ಎಂಬ ಘೋಷಣೆಯೊಂದಿಗೆ ಹಿಲರಿ ಹೊರಟಿದ್ದಾರೆ. ‘Make America Great Again' ಎನ್ನುತ್ತಾ ಟ್ರಂಪ್ ಮಾತು ಮುಂದುವರೆಸಿದ್ದಾರೆ.

ಮತದಾರರು ಇಬ್ಬರಲ್ಲಿ ಯಾರು ಉತ್ತಮರು ಎಂದಷ್ಟೇ ಲೆಕ್ಕ ಹಾಕುತ್ತಿದ್ದಾರೆ. ಹಿಲರಿ ಗೆಲ್ಲಬೇಕೆ? ಎಂಬ ಪ್ರಶ್ನೆಗೆ ಟ್ರಂಪ್ ಅಧ್ಯಕ್ಷರಾಗಬಾರದಷ್ಟೇ ಎಂಬ ಉತ್ತರ ಬರುತ್ತಿದೆ.‘ವಾಷಿಂಗ್ಟನ್ ಪೋಸ್ಟ್’, ‘ಯುಎಸ್ಎ ಟುಡೆ’, ‘ನ್ಯೂಯಾರ್ಕ್ ಟೈಮ್ಸ್’ನಂತಹ ಪ್ರಮುಖ ಪತ್ರಿಕೆಗಳೂ ಹಿಲರಿ ಅವರನ್ನು ಅನುಮೋದಿಸಿ ಸಂಪಾದಕೀಯ ಬರೆದಿವೆ.

ಕಾರಣ: ಟ್ರಂಪ್ ಸೋಲಬೇಕು ಎನ್ನುವುದೇ ಬಹುತೇಕರ ಏಕಮಾತ್ರ ಕಾರ್ಯಸೂಚಿ ಆದಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.