ADVERTISEMENT

ರಷ್ಯಾ ವಿರುದ್ಧ ನಿರ್ಬಂಧದ ಎಚ್ಚರಿಕೆ

ಉಕ್ರೇನ್‌ಗೆ ತೆರಳಿದ 14 ರಾಷ್ಟ್ರಗಳ ಸೇನಾ ವೀಕ್ಷಕರ ತಂಡ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2014, 19:30 IST
Last Updated 5 ಮಾರ್ಚ್ 2014, 19:30 IST

ಬರ್ಲಿನ್‌ /ವಿಯೆನ್ನಾ (ಎಪಿ/ಪಿಟಿಐ): ಅತಿಕ್ರಮಿಸಿ­ಕೊಂಡಿ­ರುವ ಉಕ್ರೇನ್‌ನ ಕ್ರಿಮಿಯಾ ಪರ್ಯಾಯ ದ್ವೀಪದಿಂದ ಕಾಲ್ತೆ­ಗೆ­ಯ­ದಿದ್ದರೆ ಭಾರಿ ಪರಿಣಾಮ ಎದುರಿಸ­ಬೇಕಾ­ಗುತ್ತದೆ ಎಂದು ಐರೋಪ್ಯ ಒಕ್ಕೂಟ ಬುಧವಾರ ರಷ್ಯಾಕ್ಕೆ ಎಚ್ಚರಿಕೆ ನೀಡಿದೆ.

ಕ್ರಿಮಿಯಾದಲ್ಲಿ ಬೀಡು ಬಿಟ್ಟಿರುವ ರಷ್ಯಾ ಸೇನೆಯನ್ನು ತಕ್ಷಣ  ವಾಪಸ್‌ ಕರೆಸಿಕೊಳ್ಳದಿದ್ದರೆ ‘ನಿರ್ಬಂಧ’  ಎದುರಿಸ­ಬೇಕಾ­­ಗುತ್ತದೆ ಎಂದು ಐರೋಪ್ಯ ಒಕ್ಕೂಟ ಕಠಿಣ ಸಂದೇಶ ರವಾನಿಸಿದೆ.

ಈ ಮಧ್ಯೆ ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕ ಹಾಗೂ ಆದರ ಇತರ 14 ಮಿತ್ರ ರಾಷ್ಟ್ರಗಳು, ಉಕ್ರೇನ್‌ ಹಾಗೂ ಕ್ರಿಮಿಯಾದಲ್ಲಿ ಉದ್ಭವಿಸಿರುವ ಪ್ರಕ್ಷುಬ್ಧ ಸ್ಥಿತಿ­ಯನ್ನು ಅವಲೋಕಿಸಲು ಜಂಟಿ ಸೇನಾ ವೀಕ್ಷಕರ ತಂಡ­ವನ್ನು ರಚಿಸಿವೆ.

ಪ್ರತಿ ರಾಷ್ಟ್ರದ ಇಬ್ಬರು ಪ್ರತಿನಿಧಿಗಳನ್ನು ಒಳಗೊಂಡಿರುವ ತಂಡ ಈಗಾ­ಗಲೇ ಉಕ್ರೇನ್‌ನತ್ತ ಹೊರಟಿದ್ದು, ಉಕ್ರೇನ್‌ ಮನವಿ ಮೇರೆಗೆ ಈ ತಂಡವನ್ನು ಅಲ್ಲಿಗೆ ಕಳಿಸಲಾಗುತ್ತಿದೆ ಎಂದು ಅಮೆ­ರಿಕ ಸ್ಪಷ್ಟಪಡಿಸಿದೆ.

ಅಮೆರಿಕ, ರಷ್ಯಾ ಹಾಗೂ ಐರೋಪ್ಯ ಒಕ್ಕೂಟದ ರಾಷ್ಟ್ರಗಳು ಸೇರಿ­ದಂತೆ ಒಟ್ಟು 57ದೇಶಗಳ  ಸಂಘಟನೆಯಾದ ಒಎಸ್‌­ಸಿಇ ಅಳವಡಿಸಿಕೊಂಡಿರುವ ನಿಯಮಾವಳಿ ಪ್ರಕಾರ ಇಂಥ ಪರಿಸ್ಥಿತಿಯಲ್ಲಿ ಸದಸ್ಯ ರಾಷ್ಟ್ರಕ್ಕೆ ಶಸ್ತ್ರರಹಿತ ಸೇನಾ ವೀಕ್ಷ­ಕರ ತಂಡ­ವನ್ನು ಕಳಿಸಲು ಅವಕಾಶವಿದೆ. ಆ ಅವಕಾಶ­ವನ್ನು ಬಳಸಿ­ಕೊಂಡು ಉಕ್ರೇನ್‌, ತನ್ನಲ್ಲಿಗೆ ವೀಕ್ಷಕರ ತಂಡವನ್ನು ಕಳಿಸು­ವಂತೆ  ಮನವಿ ಮಾಡಿತ್ತು.

ರಷ್ಯಾದ ಸಂಭಾವ್ಯ ಸೇನಾ ಕಾರ್ಯಾಚರಣೆ ಮತ್ತು ಅತಿಕ್ರಮಣಕ್ಕೆ  ವೀಕ್ಷಕರ ತಂಡದ ಭೇಟಿ ಕಡಿವಾಣ ಹಾಕಲಿದೆ.
ಈ ನಡುವೆ,  ರಷ್ಯಾದ ಅತಿಕ್ರಮಣ ಹಾಗೂ ಉಕ್ರೇನ್‌ನಲ್ಲಿ ಉದ್ಭ­ವಿಸಿರುವ ಅರಾಜಕತೆಯನ್ನು ಕುರಿತು ಚರ್ಚಿಸಲು ಗುರು­ವಾರ ಐರೋಪ್ಯ ಒಕ್ಕೂಟದ ನಾಯಕರ ತುರ್ತುಸಭೆ ಕರೆಯ­ಲಾಗಿದೆ. ಈ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ.

ಉಕ್ರೇನ್‌ನನ್ನು ಅತಿಕ್ರಮಿಸಿಕೊಳ್ಳುವ ಮೂಲಕ ರಷ್ಯಾ ಅಂತರರಾಷ್ಟ್ರೀಯ ಗಡಿ ಕಾನೂನು ಉಲ್ಲಂಘಿಸಿದೆ ಎಂಬ ನಿಲುವನ್ನು ಹೊಂದಿರುವ ಒಕ್ಕೂಟ, ರಷ್ಯಾದ ಮುಂದಿನ ಹೆಜ್ಜೆಗಳನ್ನು  ಕಾಯ್ದು ನೋಡುತ್ತಿದ್ದು ಆ ಆಧಾರದ ಮೇಲೆ ಮುಂದಿನ ನಿರ್ಧಾರ  ತೆಗೆದುಕೊಳ್ಳಲು ಚಿಂತನೆ ನಡೆಸಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.