ADVERTISEMENT

ಲಾಡೆನ್ ಪತ್ನಿಯರಿಗೆ ಜೈಲು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2012, 19:30 IST
Last Updated 2 ಏಪ್ರಿಲ್ 2012, 19:30 IST

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನಕ್ಕೆ ಅಕ್ರಮವಾಗಿ ಪ್ರವೇಶಿಸಿ, ನೆಲೆಸಿದ ಆರೋಪ ಹೊತ್ತ ಅಲ್‌ಖೈದಾ ಮುಖ್ಯಸ್ಥ ಒಸಾಮ ಬಿನ್ ಲಾಡೆನ್‌ನ ಮೂವರು ವಿಧವಾ ಪತ್ನಿಯರು ಮತ್ತು ಇಬ್ಬರು ಪುತ್ರಿಯರಿಗೆ ಇಲ್ಲಿನ ನ್ಯಾಯಾಲಯವೊಂದು ಸೋಮವಾರ 45 ದಿನಗಳ ಜೈಲುಶಿಕ್ಷೆ ಮತ್ತು ತಲಾ 10 ಸಾವಿರ ರೂಪಾಯಿಗಳ ದಂಡ ವಿಧಿಸಿ ತೀರ್ಪು ನೀಡಿದೆ.
 
ಜೊತೆಗೆ, ಜೈಲುಶಿಕ್ಷೆ ಅವಧಿ ಮುಗಿದ ನಂತರ ಪಾಕ್‌ನಿಂದ ಗಡೀಪಾರಿಗೂ ಆದೇಶಿಸಿದೆ.
ಹತ್ಯೆಗೀಡಾಗಿರುವ ಲಾಡೆನ್‌ನ ಕುಟುಂಬದ ಸದಸ್ಯರನ್ನು ಬಂಧಿಸಿಟ್ಟಿರುವ ಇಲ್ಲಿನ ಮನೆಯೊಂದರಲ್ಲಿ ಈ ಮಹಿಳೆಯರ ವಿಚಾರಣೆ ನಡೆಸಲಾಗಿದ್ದು, ಸಿವಿಲ್ ನ್ಯಾಯಾಧೀಶ ಶಾರುಖ್ ಅರ್ಜುಮಂಡ್ ಅವರು ಈ ಮಹಿಳೆಯರ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಿದರು. ಪಾಕ್ ಆಡಳಿತವು ಈ ಮನೆಯನ್ನು ಉಪ ಕಾರಾಗೃಹವಾಗಿ ಘೋಷಿಸಿದೆ.

ಕಳೆದ ವರ್ಷದ ಮೇ 2ರಂದು ಪಾಕಿಸ್ತಾನದ ಅಬೊಟಾಾದ್ ಬಳಿಯ ಗಾರಿಸನ್ ಪಟ್ಟಣದ ಮನೆಯೊಂದರಲ್ಲಿ ಲಾಡನ್‌ನನ್ನು ಅಮೆರಿಕ ಪಡೆಗಳು ಹತ್ಯೆ ಮಾಡಿದ ನಂತರ ಪಾಕ್ ಭದ್ರತಾ ಪಡೆಗಳು ಆತನ ಕುಟುಂಬದ ಸದಸ್ಯರನ್ನು ತನ್ನ ವಶಕ್ಕೆ ಪಡೆದು ತನಿಖೆ ನಡೆಸಿದೆ.

ಲಾಡೆನ್‌ನ ವಿಧವಾ ಪತ್ನಿ ಅಮಲ್ ಅಬ್ದುಲ್‌ಫತ್ತಾ ತನಿಖಾಧಿಕಾರಿಗಳಿಗೆ ತಿಳಿಸಿರುವಂತೆ, ಅಲ್‌ಖೈದಾ ಮುಖ್ಯಸ್ಥನು 2002ರಿಂದಲೂ ಪಾಕ್‌ನಲ್ಲಿ ಕುಟುಂಬಸಹಿತ ನೆಲೆಸಿದ್ದ. ಆತ ಹತ್ಯೆಯಾದ ಅಬೊಟಾಬಾದ್ ಕಾಂಪೌಂಡ್ ಮನೆಗೆ ಹೋಗುವ ಮುನ್ನ ಪಾಕ್‌ನ ವಾಯವ್ಯ ಭಾಗದಲ್ಲಿ ಕುಟುಂಬದೊಂದಿಗೆ ವಾಸವಿದ್ದ. ಲಾಡೆನ್ ಈ ಒಂಬತ್ತು ವರ್ಷಗಳ ಅವಧಿಯಲ್ಲಿ ಐದು ಸುರಕ್ಷಿತ ಮನೆಗಳಿಗೆ ತನ್ನ ಕುಟುಂಬವನ್ನು ಸ್ಥಳಾಂತರ ಮಾಡಿಕೊಂಡಿದ್ದ. ಇದಲ್ಲದೆ,  ಪಾಕ್‌ನಲ್ಲಿ ಆತನಿಗೆ ನಾಲ್ಕು ಮಕ್ಕಳು ಹುಟ್ಟಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.