ADVERTISEMENT

ಲಾಡೆನ್ ಹತ್ಯೆ ತನಿಖೆ: ದಾಖಲೆ ಒದಗಿಸಲು ಆಯೋಗ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಜನವರಿ 2012, 19:30 IST
Last Updated 4 ಜನವರಿ 2012, 19:30 IST

ಇಸ್ಲಾಮಾಬಾದ್ (ಪಿಟಿಐ):  ಒಸಾಮ ಬಿನ್ ಲಾಡೆನ್ ಹತ್ಯೆ ವೇಳೆ ಲಭ್ಯವಾಗಿರುವ ಅಷ್ಟೂ ದಾಖಲೆಗಳನ್ನು ಪರಿಶೀಲಿಸಲು ತನಗೆ ಅನುಮತಿ ನೀಡಬೇಕೆಂದು ಆತನ ಹತ್ಯೆ ಕುರಿತು ತನಿಖೆ ನಡೆಸುತ್ತಿರುವ ಆಯೋಗವು ಸರ್ಕಾರವನ್ನು ಕೋರಿದೆ.

ಅಮೆರಿಕ ಪಡೆಯಿಂದ ಲಾಡೆನ್ ಹತ್ಯೆಗೀಡಾದ ಅಬೋಟಾಬಾದ್‌ನ ಕಾಂಪೌಂಡ್‌ನ ಮನೆಯಲ್ಲಿ 1,87,000 ದಾಖಲೆಗಳು ದೊರೆತ್ತಿದ್ದು ಅವೆಲ್ಲವೂ ಐಎಸ್‌ಐ ವಶದಲ್ಲಿರುವುದಾಗಿ ಆಯೋಗ ಭಾವಿಸಿದೆ. ಅರೇಬಿಕ್ ಭಾಷೆಯಲ್ಲಿರುವ ಈ ದಾಖಲೆಗಳ ಅನುವಾದ ಕಾರ್ಯ ಈಗಾಗಲೇ ಆರಂಭಗೊಂಡಿದ್ದು, ಇದು ಪೂರ್ಣಗೊಳ್ಳಲು ಇನ್ನೂ ಎರಡು ಅಥವಾ ಮೂರು ತಿಂಗಳು ಹಿಡಿಯುವ ಸಾಧ್ಯತೆ ಇದೆ.

ಆಯೋಗದ ಮುಖ್ಯಸ್ಥ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾವೇದ್ ಇಕ್ಬಾಲ್ ಡಿಸೆಂಬರ್ ವೇಳೆಗೆ ತನಿಖೆ ಮುಗಿಸುವುದಾಗಿ ಕಳೆದ ತಿಂಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಈ ಗಡುವಿನೊಳಗೆ ವರದಿ ನೀಡಲು ಆಯೋಗಕ್ಕೆ ಸಾಧ್ಯವಾಗಿಲ್ಲ. ಈ ಮಧ್ಯೆ ಮಂಗಳವಾರ ನಡೆದ ವಿಚಾರಣೆ ವೇಳೆ ಆಯೋಗವು ಹಲವಾರು ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.