ADVERTISEMENT

ಲಿಬಿಯಾ: ಮೊಮರ್ ಗಢಾಫಿ ಪಲಾಯನ?

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 20:20 IST
Last Updated 21 ಫೆಬ್ರುವರಿ 2011, 20:20 IST

ಕೈರೊ (ಪಿಟಿಐ): ಲಿಬಿಯಾದ ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ದೇಶದ ಹಲವು ಪ್ರಮುಖ ನಗರಗಳನ್ನು ತಮ್ಮ ಹಿಡಿತಕ್ಕೆ ಪಡೆದುಕೊಂಡಿದ್ದು, ರಾಜಧಾನಿ ಟ್ರಿಪೋಲಿ ತಲುಪಿದ್ದಾರೆ. ಇದರಿಂದ ಆತಂಕಗೊಂಡಿರುವ ಮುಖಂಡ ಮೊಮರ್ ಗಢಾಫಿ ಅವರು ಪಲಾಯನ ಮಾಡಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ.

ನಾಲ್ಕು ದಶಕಗಳಿಂದ ಗಢಾಫಿ ಅವರ ನಿರಂಕುಶ ಅಧಿಕಾರ ನೋಡುತ್ತಿರುವ ದೇಶದಲ್ಲಿ ದಿನದಿಂದ ದಿನಕ್ಕೆ ಪ್ರತಿಭಟನೆಯ ಕಾವು ಹೆಚ್ಚುತ್ತಿದೆ. ಇದಕ್ಕೆ ಪ್ರತಿಯಾಗಿ ಲಿಬಿಯಾದ ಭದ್ರತಾ ಪಡೆಗಳು ಸಹ ಪ್ರತಿಭಟನಾಕಾರರನ್ನು ದಮನಿಸುವ ಕಾರ್ಯ ಕೈಗೊಂಡಿದೆ ಎಂದು ಟಿವಿ ವರದಿಗಳು ತಿಳಿಸಿವೆ. ಆದರೆ ಗಢಾಫಿ ಅವರು ಎಲ್ಲಿಗೆ ಪಲಾಯನ ಮಾಡಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿಗಳು ಸಿಕ್ಕಿಲ್ಲ.

ಟ್ರಿಪೋಲಿಯಲ್ಲಿ ಯುದ್ಧವಿಮಾನಗಳು ಪ್ರತಿ ಭಟನಾಕಾರರತ್ತ ಗುಂಡು ಹಾರಿಸಿವೆ ಎಂದೂ ಕೆಲವು ವರದಿಗಳು ತಿಳಿಸಿವೆ. ಇಲ್ಲಿನ ಎಲ್ಲಾ ನಿಸ್ತಂತು ಸಂಪರ್ಕ ವ್ಯವಸ್ಥೆ ಕಡಿದುಹೋಗಿದೆ ಎಂದೂ ಹೇಳಲಾಗಿದೆ.

ಕಳೆದ ಐದು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ 400ಕ್ಕೂ ಅಧಿಕ ಮಂದಿ ಸತ್ತಿದ್ದಾರೆ ಎಂದು ಅಂತರರಾಷ್ಟ್ರೀಯ ಮಾನವ ಹಕ್ಕು ಗುಂಪುಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.