ADVERTISEMENT

ವಲಸೆ ನೀತಿ ಬದಲಾವಣೆಗೆ ಆಗ್ರಹ

ಗಡಿ ಪ್ರದೇಶದಲ್ಲಿ ಹೆತ್ತವರಿಂದ ಮಕ್ಕಳನ್ನು ಬೇರ್ಪಡಿಸುವ ಪದ್ಧತಿ

ಏಜೆನ್ಸೀಸ್
Published 18 ಜೂನ್ 2018, 16:26 IST
Last Updated 18 ಜೂನ್ 2018, 16:26 IST
ಮೆಲಾನಿಯಾ ಟ್ರಂಪ್
ಮೆಲಾನಿಯಾ ಟ್ರಂಪ್   

ವಾಷಿಂಗ್ಟನ್‌: ದೇಶದ ದಕ್ಷಿಣ ಭಾಗದ ಗಡಿಯಲ್ಲಿ ವಲಸೆ ಬರುವವರ ಪೈಕಿ ಹೆತ್ತವರು ಮತ್ತು ಮಕ್ಕಳನ್ನು ಬೇರ್ಪಡಿಸುವ ವಿಚಾರ ಭಾವನಾತ್ಮಕ ಚರ್ಚೆಗೆ ಕಾರಣವಾಗಿದ್ದು, ಭೂತ ಹಾಗೂ ವರ್ತಮಾನದ ಪದ್ಧತಿಯನ್ನು ಸಂಪೂರ್ಣವಾಗಿ ಬದಲಾಯಿಸಬೇಕು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪತ್ನಿ ಮೆಲಾನಿಯಾ ಟ್ರಂಪ್‌ ಒತ್ತಾಯಿಸಿದ್ದಾರೆ.

‘ಮಕ್ಕಳನ್ನು ಪ್ರತ್ಯೇಕಿಸಿದ್ದಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿರುವುದನ್ನು ಗಮನಿಸಿದ್ದೇನೆ. ಎರಡು ಪಕ್ಷಗಳು ಕುಳಿತು ಚರ್ಚಿಸಿ ದೇಶದ ವಲಸೆ ಕಾನೂನಿನಲ್ಲಿ ಬದಲಾವಣೆ ತರಬಹುದು’ ಎಂದು ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಅವರ ಕಚೇರಿ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.

ಹೆತ್ತವರಿಂದ ಪ್ರತ್ಯೇಕಗೊಂಡ ಮಕ್ಕಳು ಕಣ್ಣೀರಿಡುತ್ತಿರುವ ದೃಶ್ಯ ಟಿವಿ ವಾಹಿನಿಗಳು ಹಾಗೂ ಆನ್‌ಲೈನ್‌ನಲ್ಲಿ ಪ್ರಸಾರಗೊಂಡ ಕೆಲವು ದಿನಗಳ ನಂತರ ಮೆಲಾನಿಯಾ ಅವರು ಈ ಹೇಳಿಕೆ ನೀಡಿದ್ದಾರೆ.

ADVERTISEMENT

‘ದೇಶದ ಕಾನೂನನ್ನು ನಾವು ಅನುಸರಿಸಬೇಕು, ಅದೇ ರೀತಿ ಹೃದಯದ ಭಾವನೆಗೆ ಬೆಲೆ ನೀಡಿ ಆಡಳಿತ ನಡೆಸಬೇಕು. ಮಕ್ಕಳನ್ನು ಪ್ರತ್ಯೇಕ ಮಾಡುತ್ತಿರುವ ವಿಷಯ ತಿಳಿದು ಮೆಲಾನಿಯಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ’ ಎಂದು ಅವರ ವಕ್ತಾರೆ ಸ್ಟಿಫನಿ ಗ್ರೀಶಂ ಅವರು ತಿಳಿಸಿದರು.

ವಲಸೆ ನೀತಿ ಕುರಿತಂತೆ ಡೆಮಾಕ್ರಟಿಕ್‌ ಮತ್ತು ರಿಪಬ್ಲಿಕನ್‌ ಪಕ್ಷದ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ.

ಈ ನೀತಿಯು ‘ಅಮಾನವೀಯ’ ಮತ್ತು ‘ನೀತಿಗೆಟ್ಟ’ ನಿರ್ಧಾರವಾಗಿದೆ. ಇದರಿಂದ ನನ್ನ ಹೃದಯವೇ ಚೂರಾಗಿದೆ’ ಎಂದು ಮಾಜಿ ಪ್ರಥಮ ಮಹಿಳೆ ಲಾರಾ ಬುಷ್‌ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟೀಕೆಗೆ ಗುರಿಯಾದ ವಲಸೆ ನೀತಿ!: ಮೇ ತಿಂಗಳಿನಿಂದ ಟ್ರಂಪ್‌ ಸರ್ಕಾರವು ಹೊಸ ವಲಸೆ ನೀತಿಯನ್ನು ಜಾರಿಗೊಳಿಸಿದೆ. ‌ಇದರ ಅನ್ವಯ, ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸುವವರನ್ನು ಬಂಧಿಸಿ ಜೈಲಿಗೆ ತಳ್ಳಿ ಕ್ರಿಮಿನಲ್‌ ವಿಚಾರಣೆಗೆ ಗುರಿಪಡಿಸಲಾಗುತ್ತಿದೆ. ಇದರಿಂದ ವಯಸ್ಕರು ಜೈಲು ಪಾಲಾದರೆ, ಅವರ ಮಕ್ಕಳನ್ನು ಪ್ರತ್ಯೇಕವಾಗಿ ಇರಿಸಲಾಗುತ್ತದೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ, ಏಪ್ರಿಲ್‌, ಮೇ ತಿಂಗಳ ಆರು ವಾರಗಳಲ್ಲಿ ಹೆತ್ತವರಿಂದ ಎರಡು ಸಾವಿರ ಮಕ್ಕಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ.

‘ನ್ಯಾಯಸಮ್ಮತವಲ್ಲ’
ಜಿನೀವಾ (ಎಎಫ್‌ಪಿ):
‘ವಲಸೆ ಬಂದ ಹೆತ್ತವರಿಂದ ಅವರ ಮಕ್ಕಳನ್ನು ಬೇರ್ಪಡಿಸುವುದನ್ನು ತಕ್ಷಣವೇ ಸ್ಥಗಿತಗೊಳಿಸಬೇಕು’ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ಝೈದ್‌ ರಾದ್‌ ಒತ್ತಾಯಿಸಿದ್ದಾರೆ.

ಜಿನೀವಾದಲ್ಲಿನ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ಉದ್ಘಾಟನಾ ಅಧಿವೇಶನ ಆರಂಭಿಸಿ ಮಾತನಾಡಿದ ಅವರು, ‘ಹೆತ್ತವರಿಂದ ಮಕ್ಕಳನ್ನು ಬೇರ್ಪಡಿಸುವ ನೀತಿ ಯಾವುದೇ ಕಾರಣಕ್ಕೂ ಒಪ್ಪುವಂತಹದ್ದಲ್ಲ’ ಎಂದರು.

‘ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಅಮೆರಿಕ ಸರ್ಕಾರವು ತಕ್ಷಣವೇ ಈ ಪದ್ಧತಿಯನ್ನು ಕೈಬಿಡಬೇಕು’ ಎಂದು ಶೃಂಗಸಭೆ ನಿರ್ಣಯ ತೆಗೆದುಕೊಂಡಿದೆ ಎಂದು ಇದೇ ವೇಳೆ ಅವರು ತಿಳಿಸಿದರು.

ಟೀಕೆಗೆ ಗುರಿಯಾದ ವಲಸೆ ನೀತಿ!
ಕಳೆದ ಮೇ ತಿಂಗಳಿನಿಂದ ಟ್ರಂಪ್‌ ಸರ್ಕಾರವು ಹೊಸ ವಲಸೆ ನೀತಿಯನ್ನು ಜಾರಿಗೊಳಿಸಿದೆ. ‌ಇದರ ಅನ್ವಯ, ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸುವವರನ್ನು ಬಂಧಿಸಿ ಜೈಲಿಗೆ ತಳ್ಳಿ ಕ್ರಿಮಿನಲ್‌ ವಿಚಾರಣೆಗೆ ಗುರಿಪಡಿಸಲಾಗುತ್ತಿದೆ. ಇದರಿಂದ ವಯಸ್ಕರು ಜೈಲುಪಾಲಾದರೆ, ಅವರ ಮಕ್ಕಳನ್ನು ಪ್ರತ್ಯೇಕವಾಗಿಸಲಾಗುತ್ತದೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ, ಏಪ್ರಿಲ್‌, ಮೇ ತಿಂಗಳ ಆರು ವಾರಗಳಲ್ಲಿ ಹೆತ್ತವರಿಂದ 2 ಸಾವಿರ ಮಕ್ಕಳನ್ನು ಪ್ರತ್ಯೇಕಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.