ADVERTISEMENT

ವಿದೇಶ:ಸಂಕ್ಷಿಪ್ತ ಸುದ್ದಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2012, 19:30 IST
Last Updated 7 ಜೂನ್ 2012, 19:30 IST
ವಿದೇಶ:ಸಂಕ್ಷಿಪ್ತ ಸುದ್ದಿ
ವಿದೇಶ:ಸಂಕ್ಷಿಪ್ತ ಸುದ್ದಿ   

ಸದ್ದಾಂ ಆಪ್ತ ಕಾರ್ಯದರ್ಶಿಗೆ ಗಲ್ಲು
ಬಾಗ್ದಾದ್ (ಐಎಎನ್‌ಎಸ್):
ನೇಣುಗಂಬವೇರಿದ ಇರಾಕ್‌ನ ಪದಚ್ಯುತ ಅಧ್ಯಕ್ಷ ಸದ್ದಾಂ ಹುಸೇನ್ ಅವರ ಆಪ್ತ ಕಾರ್ಯದರ್ಶಿ ಮತ್ತು ಭದ್ರತಾ ಅಧಿಕಾರಿಯನ್ನೂ ಗುರುವಾರ ಗಲ್ಲಿಗೇರಿಸಲಾಗಿದೆ.ಮರಣದಂಡನೆಗೆ ಗುರಿಯಾದ ಅಬೆದ್ ಹಮೀದ್ ಹಮದ್ ಅಲ್-ತಿಕ್ರೀತಿ ಮೇಲೆ ತಮ್ಮ ಎದುರಾಳಿ ಧಾರ್ಮಿಕ ಪಕ್ಷಗಳ ಸದಸ್ಯರನ್ನು ಸಾಮೂಹಿಕವಾಗಿ ಹತ್ಯೆ ಮಾಡಿದ್ದ ಆರೋಪವಿತ್ತು.

ಈ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಸಾಬೀತಾದ ಹಿನ್ನೆಲೆಯಲ್ಲಿ 2010ರ ಅಕ್ಟೋಬರ್‌ನಲ್ಲಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಇರಾಕ್ ನ್ಯಾಯಾಂಗ ಇಲಾಖೆ ಗುರುವಾರ ಈ ವ್ಯಕ್ತಿಯನ್ನು ಗಲ್ಲಿಗೆ ಏರಿಸಿದೆ.

ಸಿರಿಯಾ ಸಂಘರ್ಷ: 86 ಸಾವು
ಡಮಾಸ್ಕಸ್ (ಐಎಎನ್‌ಎಸ್): ಸಿರಿಯಾದ ಉತ್ತರ ಹಮಾ ಪ್ರಾಂತ್ಯದ ಅಲ್-ಖುಬಯಾರ್ ಗ್ರಾಮದಲ್ಲಿ ಸರ್ಕಾರಿ ಪಡೆಗಳು ಹಾಗೂ ವಿರೋಧಿ ಪ್ರತಿಭಟನಾಕಾರರ ನಡುವೆ ಗುರುವಾರ ನಡೆದ ಸಂಘರ್ಷದಲ್ಲಿ 86 ಜನ ಮೃತಪಟ್ಟಿದ್ದಾರೆ.

ಬ್ರಿಟನ್ ಮೂಲದ ಮಾನವಹಕ್ಕು ಸಂಘಟನೆಯೊಂದು ಆಲ್-ಜಜೀರಾ ಸುದ್ದಿವಾಹಿನಿಗೆ ಈ ವಿಚಾರ ತಿಳಿಸಿದೆ. ಆದರೆ ಈ ವರದಿಯನ್ನು ತಿರಸ್ಕರಿಸಿರುವ ಸಿರಿಯಾ ಸರ್ಕಾರವು 9 ಮಂದಿ ಉಗ್ರರಿಂದ ಹತರಾಗಿದ್ದಾರೆ ಎಂದು ಹೇಳಿದೆ.

ಚೌಧರಿ ಪೀಠದಿಂದ ಹೊರಕ್ಕೆ
ಇಸ್ಲಾಮಾಬಾದ್ (ಪಿಟಿಐ): ತಮ್ಮ ಮಗನ ಮೇಲೆ ಕೇಳಿಬಂದಿರುವ ಅವ್ಯವಹಾರ ಆರೋಪದ ವಿಚಾರಣಾ ನ್ಯಾಯಪೀಠದಿಂದ ಹೊರಗುಳಿಯುವ ನಿರ್ಧಾರವನ್ನು ಪಾಕಿಸ್ತಾನ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ಗುರುವಾರ ತೆಗೆದುಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ಚೌಧರಿಯವರೇ ವಿಚಾರಣೆ ಕೈಗೆತ್ತಿಕೊಳ್ಳುತ್ತೇನೆ ಎಂದು ಹೇಳಿದ್ದರಿಂದ ಅಟಾರ್ನಿ ಜನರಲ್ ಇರ್ಫಾನ್ ಖಾದಿರ್ ಸೇರಿದಂತೆ ಅನೇಕ ಕಾನೂನು ತಜ್ಞರ ಟೀಕೆಗೆ ಗುರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯಲ್ಲಿ ತಾವು ಹಸ್ತಕ್ಷೇಪ ಮಾಡುವುದಿಲ್ಲ ಎಂಬ ನಿರ್ಧಾರಕ್ಕೆ ಅವರು ಬಂದಿದ್ದಾರೆ ಎನ್ನಲಾಗಿದೆ.

ಗಿಲಾನಿ ಪ್ರಕರಣ: ನೋಟಿಸ್
ಇಸ್ಲಾಮಾಬಾದ್ (ಪಿಟಿಐ): ನ್ಯಾಯಾಂಗ ನಿಂದನೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುವಂತೆ ಅನೇಕ ಅರ್ಜಿಗಳು ಬರುತ್ತಿದ್ದು, ಹಿನ್ನೆಲೆಯಲ್ಲಿ ಸೂಕ್ತ ಉತ್ತರ ನೀಡುವಂತೆ ಸೂಚಿಸಿ ಪಾಕ್ ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ಫೆಹ್ಮಿದಾ ಮಿರ್ಜಾ, ಗಿಲಾನಿ ಹಾಗೂ ಚುನಾವಣಾ ಆಯೋಗಕ್ಕೆ ಗುರುವಾರ ಸುಪ್ರೀಂಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ನ್ಯಾಯಾಲಯವು ಈ ಪ್ರಕರಣವನ್ನು ಜೂನ್ 14ರಂದು ಮರುವಿಚಾರಣೆಗೆ ಒಳಪಡಿಸುತ್ತದೆ. ಆ ದಿನಾಂಕದೊಳಗೆ ಉತ್ತರಿಸುವಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ಈ ನಿರ್ದೇಶನ ನೀಡಿದೆ.

ಭಾರತೀಯನಿಗೆ ಆರು ವರ್ಷ ಸಜೆ

ಮೆಲ್ಬರ್ನ್ (ಪಿಟಿಐ): ಅಮಾನುಷವಾಗಿ ಹೆಂಡತಿ ಕೊಂದ ಭಾರತೀಯ ಮೂಲದ ವ್ಯಕ್ತಿಗೆ ಆಸ್ಟ್ರೇಲಿಯ ನ್ಯಾಯಾಲಯ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆಪತ್ನಿಯ ದೇಹದ ಮೇಲೆ 8 ಬಾರಿ ಇರಿದು ಕೊಲೆ ಮಾಡಿರುವ ಈತನು, ಆಕೆ ಪರಪುರುಷನೊಡನೆ ಸಂಬಂಧ ಹೊಂದಿದ್ದಳು ಎಂದು ಆರೋಪಿಸಿದ್ದಾನೆ.

ವಿಚಾರಣೆಯ ವೇಳೆ ಆತನಲ್ಲಿ ಪತ್ನಿಯನ್ನು ಕೊಂದ ಪಾಪ ಪ್ರಜ್ಞೆ ಬದಲು, ನರಹತ್ಯೆಯ ಮಾಡಿದೆನಲ್ಲ ಎಂಬ ಪಶ್ಚಾತ್ತಾಪ ಕಾಡುತ್ತಿತ್ತು ಎಂದು ನ್ಯಾಯಾಧೀಶರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.