ADVERTISEMENT

ವಿದೇಶಿಯರು ಸೇರಿ 9 ಮಂದಿ ಸಾವು

ಕಾಬೂಲ್‌ ಹೋಟೆಲ್‌ ಮೇಲೆ ಗುಂಡಿನ ದಾಳಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 19:30 IST
Last Updated 21 ಮಾರ್ಚ್ 2014, 19:30 IST

ಕಾಬೂಲ್‌ (ಎಪಿ): ಇಲ್ಲಿಯ ಹೋಟೆಲ್‌ ಒಂದರ ಮೇಲೆ ಶುಕ್ರವಾರ ದಾಳಿ ನಡೆಸಿದ ನಾಲ್ವರು ಸಶಸ್ತ್ರಧಾರಿಗಳು ಮನಬಂದಂತೆ ಗುಂಡಿನಮಳೆಗರೆದಾಗ ವಿದೇಶಿಯರು, ಮಕ್ಕಳು ಸೇರಿ ಒಟ್ಟು 9 ಜನ ಮೃತಪಟ್ಟರು.

ಮೃತರಲ್ಲಿ ಇಬ್ಬರು ಕೆನಡಾ ಪ್ರಜೆಗಳು, ಅಫ್ಘನ್‌ ಪತ್ರಕರ್ತ ಸರ್ದಾರ್‌ ಅಹ್ಮದ್‌ (40) ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಸಹ ಸೇರಿದ್ದಾರೆ.
ಕಾಬೂಲ್‌ ಮೇಲೆ ಹಲವು ಬಾರಿ ದಾಳಿ ನಡೆಸಲಾಗಿದ್ದರೂ ನಗರದ ಅತ್ಯಂತ ಸುರಕ್ಷಿತ ಪ್ರದೇಶ ಎನಿಸಿದ ‘ಸೆರೆನಾ’ ಹೋಟೆಲ್‌ ಸಹ ಉಗ್ರರ ದಾಳಿಗೆ ತುತ್ತಾಗಿರುವುದು ನಿಜಕ್ಕೂ ಆತಂಕ ಮೂಡಿಸಿದೆ.

ಸರ್ದಾರ್‌ ಅಹ್ಮದ್‌ 2003ರಲ್ಲಿ ಎಎಫ್‌ಪಿ ಸುದ್ದಿ ಸಂಸ್ಥೆಗೆ ಸೇರಿದ್ದು ಕಾಬೂಲ್‌ನಲ್ಲಿ ಹಿರಿಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಕಾಬೂಲ್‌ನಲ್ಲಿ ಈ ಹಿಂದೆ ನಡೆದ ಹಿಂಸಾಚಾರಗಳಲ್ಲಿ ವಿದೇಶಿಯರನ್ನು ಹೆಚ್ಚಾಗಿ ಗುರಿಯಾಗಿಟ್ಟುಕೊಂಡಿದ್ದಿಲ್ಲ. ಆದರೆ ಇದೀಗ ಇಬ್ಬರು ವಿದೇಶಿಯರು ಸಹ ಉಗ್ರರ ದಾಳಿಗೆ ಬಲಿಯಾಗಿದ್ದಾರೆ.

2001ರ ನಂತರ ಏ.5ರಂದು ದೇಶದಲ್ಲಿ ರಾಷ್ಟ್ರೀಯ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಕಂಡುಬರುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಘಟನೆ ಕುರಿತು ಮಾಹಿತಿ ನೀಡಿರುವ ಆಫ್ಫನ್‌ ಸಚಿವ ಸಿದಿಕ್‌ ಸಿದ್ದಿಕ್ಕಿ, ದಾಳಿಯ ಸಂಚನ್ನು ಹೊರ ದೇಶದಲ್ಲಿ ರೂಪಿಸಲಾಗಿದೆ. ಅತ್ಯಂತ ಭದ್ರತೆಯ ‘ಸೆರೆನಾ’ ಹೋಟೆಲ್‌ಗೆ ವಿಶ್ವಸಂಸ್ಥೆ ಸಿಬ್ಬಂದಿ, ವಿವಿಧ ದೇಶಗಳ ರಾಜತಾಂತ್ರಿಕರು ಸದಾ ಭೇಟಿ ನೀಡುತ್ತಿದ್ದು, ಈ ಕಾರಣದಿಂದಲೇ ಹೋಟೆಲ್‌ ಮೇಲೆ ಉಗ್ರರು ದಾಳಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

‘ಆಫ್ಘನ್‌ನ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ದಾಳಿಕೋರರು ಹೋಟೆಲ್‌­ನೊಳಗೆ ಪ್ರವೇಶಿಸುತ್ತಿದ್ದಂತೆ ಗುಂಡಿನ ಸುರಿಮಳೆಗೈಯಲು ಆರಂಭಿಸಿ­ದರು. ಪರಿಣಾ­ಮ­ವಾಗಿ ಐವರು ಸ್ಥಳೀಯ­ರೊಂದಿಗೆ ನಾಲ್ವರು ವಿದೇಶಿ­ಯರೂ ಮೃತಪಟ್ಟಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ. ದಾಳಿಯ ಹೊಣೆಯನ್ನು ತಾಲಿಬಾನ್‌ ಹೊತ್ತಿದೆ.

‘ಯಾವುದೇ ಸ್ಥಳದ ಮೇಲೆ ದಾಳಿ ಮಾಡಬೇಕು ಎಂದು ನಮ್ಮ ಜನ ನಿರ್ಧರಿಸಿದ್ದರೆ, ಅವರು ಆ ಕೆಲಸವನ್ನು ಮಾಡಿಯೇ ಮಾಡುತ್ತಾರೆ’ ಎಂದು ತಾಲಿಬಾನ್‌ ವಕ್ತಾರ  ಜಬಿಯುಲ್ಲಾ ಮುಜಾಹಿದ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.