ADVERTISEMENT

ವಿದೇಶ ಸಂಕ್ಷಿಪ್ತ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2012, 19:30 IST
Last Updated 6 ನವೆಂಬರ್ 2012, 19:30 IST

ಹಖ್ಖಾನಿ ವಿರುದ್ಧ ನಿರ್ಬಂಧ
ವಿಶ್ವಸಂಸ್ಥೆ (ಪಿಟಿಐ
): ಪಾಕಿಸ್ತಾನ ಮೂಲದ ಹಖ್ಖಾನಿ ಭಯೋತ್ಪಾದಕ ಜಾಲ ಹಾಗೂ ಅದರ ಆತ್ಮಹತ್ಯಾ ಕಾರ್ಯಾಚರಣೆಯ ಮುಖ್ಯಸ್ಥರ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಜಾಗತಿಕ ನಿರ್ಬಂಧ ವಿಧಿಸಿದೆ.
ಅಮೆರಿಕದ ವಿದೇಶಾಂಗ ಇಲಾಖೆ ಜಕೀರ್‌ನನ್ನು `ಜಾಗತಿಕ ಭಯೋತ್ಪಾದಕ~ ಎಂದು ಕರೆದು ಆತನ ವಿರುದ್ಧ ಆರ್ಥಿಕ ದಿಗ್ಬಂಧನ ವಿಧಿಸಿದ ದಿನವೇ ಭದ್ರತಾ ಮಂಡಳಿ ಈ ನಿರ್ಬಂಧ ಹೇರಿದೆ.

ಮಲಾಲಾ ಕ್ಷಮೆ ಕೋರಿದ ಸಹೋದರಿ
ಇಸ್ಲಾಮಾಬಾದ್
(ಪಿಟಿಐ): ಮಲಾಲಾ ಯುಸೂಫ್‌ಝಾಯಿ ಮೇಲೆ  ದಾಳಿ ನಡೆಸಿದ ಶಂಕಿತ ಆರೋಪಿಯ ಸಹೋದರಿಯು ಮಲಾಲಾ ಕ್ಷಮೆ ಕೋರಿದ್ದಾರೆ.

`ನನ್ನ ಸಹೋದರನ ಕೃತ್ಯದಿಂದ ನಮ್ಮ ಕುಟುಂಬ ಅವಮಾನ ಪಡುವಂತಾಗಿದೆ. ಮಲಾಲಾ ನನ್ನ ಸಹೋದರಿ ಇದ್ದಂತೆ. ಆಕೆ ಬಹುಬೇಗ ಗುಣಮುಖಳಾಗಲಿ.~ ಎಂದು ಶಂಕಿತ ಆರೋಪಿ ಅತಾವುಲ್ಲಾ ಖಾನ್ ಸಹೋದರಿ ರೆಹಾನಾ ಹಲೀಂ ವಿಷಾದಿಸಿದ್ದಾರೆ.

ಲ್ಯಾಪ್‌ಟಾಪ್: ವೀರ್ಯಾಣು ಹಾನಿ
ಲಂಡನ್ (ಪಿಟಿಐ):
ಲ್ಯಾಪ್‌ಟಾಪ್ ಬಳಕೆಯು ಪುರುಷರ ವೀರ್ಯಾಣು ಉತ್ಪತ್ತಿ ಮತ್ತು ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವೈದ್ಯರು.

 30 ವರ್ಷದ ಎಲೆಕ್ಟ್ರಿಷಿಯನ್ ಸ್ಕಾಟ್ ರೆಡ್ ಹಾಗೂ  ಪತ್ನಿ ಲೌರಾಗೆ ಮಕ್ಕಳಾಗಿರಲಿಲ್ಲ. ವೈದ್ಯರನ್ನು ಸಂಪರ್ಕಿಸಿದಾಗ ಸ್ಕಾಟ್ ಲ್ಯಾಪ್‌ಟಾಪ್ ಬಳಸುತ್ತಿರುವುದು ಮಕ್ಕಳಾಗದಿರಲು  ಕಾರಣ ಎಂದು ತಿಳಿಯಿತು. ಲ್ಯಾಪ್‌ಟಾಪ್‌ನ ಬಿಸಿಯು ವೀರ್ಯಾಣು ಉತ್ಪತ್ತಿಗೆ ಹಾನಿ ಮಾಡಿದೆ ಎಂದು ವೈದ್ಯರು ತಿಳಿಸಿದರು.
`ತಪಾಸಣೆಯ ಬಳಿಕ  ಸ್ಕಾಟ್,  ಟೇಬಲ್ ಮೇಲೆ ಲ್ಯಾಪ್‌ಟಾಪ್ ಇಟ್ಟು ಬಳಸ ತೊಡಗಿದರು. 3 ತಿಂಗಳ ನಂತರ ಅವರ ಪತ್ನಿ ಗರ್ಭಧರಿಸಿದರು~ ` ದಿ ಡೈಲಿ ಮೇಲ್~ ವರದಿ ಮಾಡಿದೆ.

ಲಾಡೆನ್ ಹತ್ಯೆ ಚಿತ್ರ: 27 ಲಕ್ಷ ಜನ ವೀಕ್ಷಣೆ
ವಾಷಿಂಗ್ಟನ್ (ಪಿಟಿಐ):
ಕುಖ್ಯಾತ ಭಯೋತ್ಪಾದಕ ಒಸಾಮ ಬಿನ್ ಲಾಡೆನ್ ಹತ್ಯೆಗೆ ಅಮೆರಿಕದ ಕಮಾಂಡೊ ಪಡೆಗಳು ನಡೆಸಿದ ದಾಳಿ ಕುರಿತ ಸಾಕ್ಷ್ಯಚಿತ್ರವನ್ನು 27 ಲಕ್ಷ ಮಂದಿ ವೀಕ್ಷಿಸಿದ್ದಾರೆ ಎಂದು ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ ವರದಿ ಮಾಡಿದೆ.

`ಸೀಲ್ ಟೀಮ್ ಸಿಕ್ಸ್: ದಿ ರೇಡ್ ಆನ್ ಒಸಾಮ ಬಿನ್ ಲಾಡೆನ್~ ಚಿತ್ರವನ್ನು ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಎರಡು ದಿನ ಮುಂಚಿತವಾಗಿ ಅಲ್ಲಿನ ಕೇಬಲ್ ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗುವುದು ಎಂದು ಅಕ್ಟೋಬರ್‌ನಲ್ಲಿ ಘೋಷಿಸಿದಾಗಲೇ ಜನರಲ್ಲಿ ಹೊಸ ಸಂಚಲನ ಮೂಡಿತ್ತು. ಇದು ನ್ಯಾಷನಲ್ ಜಿಯಾಗ್ರಫಿಯ ಈ ವರ್ಷದ ಅತ್ಯಂತ ಜನಪ್ರಿಯ ಚಿತ್ರವಾಗಿದೆಯಲ್ಲದೆ ಚಾನೆಲ್ ಇತಿಹಾಸದಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯ ಜನರು ವೀಕ್ಷಿಸಿದ ಆರನೇ ಚಿತ್ರವಾಗಿದೆ.
 

ದಾಳಿ: 27 ಸಾವು
ಬಾಗ್ದಾದ್(ಎಪಿ):
ಉತ್ತರ ಬಾಗ್ದಾದ್‌ನ ಸೇನಾ ನೆಲೆ ಮೇಲೆ ಮಂಗಳವಾರ ಕಾರ್ ಬಾಂಬ್ ದಾಳಿ ನಡೆದಿದ್ದು, 19 ಸೈನಿಕರು ಸೇರಿದಂತೆ 27 ನಾಗರಿಕರು ಮೃತಪಟ್ಟಿದ್ದಾರೆ. 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

`ಆರೋಪ ಕೈಬಿಡಿ~

ADVERTISEMENT

ವಾಷಿಂಗ್ಟನ್ (ಎಎಫ್‌ಪಿ): ತನ್ನ ವಿರುದ್ಧದ ಆರೋಪಗಳನ್ನು ವಜಾ ಮಾಡುವಂತೆ 9/11 ದಾಳಿ ಸಂಚುಕೋರ ಮನವಿ ಮಾಡಿಕೊಂಡಿದ್ದಾನೆ.ಲಾಡೆನ್ ವಾಹನ ಚಾಲಕನಾಗಿದ್ದ ಸಲೀಂ ಹಮ್‌ದನ್‌ನನ್ನು ಆರೋಪ ಮುಕ್ತಗೊಳಿಸಿದ ರೀತಿಯಲ್ಲಿಯೇ ತನ್ನನ್ನೂ ಖುಲಾಸೆಗೊಳಿಸಬೇಕೆಂದು ಸೌದಿ ಪ್ರಜೆ ಮುಸ್ತಫಾ ಅಲ್-ಹಾವ್‌ಸಾವಿ ಕೋರಿದ್ದಾನೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.