ADVERTISEMENT

ವಿಮಾನ ಅಪಘಾತ: 19 ಜನರ ಸಾವು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2011, 19:30 IST
Last Updated 25 ಸೆಪ್ಟೆಂಬರ್ 2011, 19:30 IST
ವಿಮಾನ ಅಪಘಾತ: 19 ಜನರ ಸಾವು
ವಿಮಾನ ಅಪಘಾತ: 19 ಜನರ ಸಾವು   

ಕಠ್ಮಂಡು (ಪಿಟಿಐ):  ಮೌಂಟ್ ಎವರೆಸ್ಟ್ ಸುತ್ತಮುತ್ತಲ ರಮಣೀಯ ಪ್ರಕೃತಿಯನ್ನು ವೀಕ್ಷಿಸಲು ತೆರಳಿದ್ದ ಪ್ರವಾಸಿಗರಿದ್ದ ಪುಟ್ಟ ವಿಮಾನವೊಂದು ಹಿಂದಿರುಗುವ ಮಾರ್ಗಮಧ್ಯೆ ಕಠ್ಮಂಡು ಸಮೀಪದ ಕೊಟ್ಡಾಂಡ ಬೆಟ್ಟ ಪ್ರದೇಶದಲ್ಲಿ ಭಾನುವಾರ ಅಪಘಾತಕ್ಕೀಡಾಗಿದ್ದು, 10 ಭಾರತೀಯರೂ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 19 ಜನರು ಮೃತಪಟ್ಟಿದ್ದಾರೆ.

ಖಾಸಗಿ ವಿಮಾನಯಾನ ಸಂಸ್ಥೆ ಬುದ್ಧ ಏರ್ ಏರ್‌ಲೈನ್ಸ್‌ಗೆ ಸೇರಿದ್ದ ಬೀಚ್‌ಕ್ರಾಫ್ಟ್ ವಿಮಾನ (ಬಿಎಚ್‌ಎ 103) ಭಾನುವಾರ ಬೆಳಿಗೆ 7.30ರ ಸುಮಾರಿಗೆ  ಕಠ್ಮಂಡುವಿನಿಂದ 20 ಕಿ.ಮೀ ದೂರದಲ್ಲಿರುವ ಲಲಿತ್‌ಪುರ ಜಿಲ್ಲೆಯ ಕೊಟ್ಡಾಂಡ ಬೆಟ್ಟ ಪ್ರದೇಶದಲ್ಲಿ ಅಪಘಾತಕ್ಕೀಡಾಯಿತು ಎಂದು ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎಎನ್) ಹೇಳಿದೆ.

ಭಾರತದ ಹತ್ತು ಮಂದಿ, ಅಮೆರಿಕದ ಇಬ್ಬರು ನಾಗರಿಕರು, ಒಬ್ಬ ಜಪಾನ್ ಪ್ರಜೆ, ಮೂವರು ನೇಪಾಳ ನಾಗರಿಕರು ಮತ್ತು ಮೂವರು ಸಿಬ್ಬಂದಿ ವಿಮಾನದಲ್ಲಿದ್ದರು.

ದುರ್ಘಟನೆಯಲ್ಲಿ ಎಲ್ಲರೂ ಮೃತಪಟ್ಟಿದ್ದಾರೆ ತ್ರಿಭುವನ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ರಕ್ಷಣಾ ಸಮನ್ವಯ ಕೇಂದ್ರ ಹೇಳಿದೆ.

ಅಪಘಾತ ಸಂಭವಿಸಿದಾಗ ವಿಮಾನದಲ್ಲಿದ್ದ ನೇಪಾಳದ ಪ್ರಜೆಯೊಬ್ಬ ಬದುಕುಳಿದಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟ ಹತ್ತು ಭಾರತೀಯರ ಪೈಕಿ ಎಂಟು ಮಂದಿ ತಮಿಳುನಾಡಿನವರು. ಕಠ್ಮಂಡುವಿನಲ್ಲಿರುವ ಯುನಿಸೆಫ್‌ನ ಆರೋಗ್ಯ ಘಟಕದ ಮುಖ್ಯಸ್ಥರಾದ ಪಂಕಜ್ ಮೆಹ್ತಾ ಹಾಗೂ ಅವರ ಪತ್ನಿ  ಛಾಯಾ ಅವರು ಪ್ರಾಣ ಕಳೆದುಕೊಂಡ ಇನ್ನಿಬ್ಬರು ಭಾರತೀಯರಾಗಿದ್ದಾರೆ.

ಮೌಂಟ್ ಎವರೆಸ್ಟ್ ಮತ್ತು ಅದರ ಸುತ್ತಮುತ್ತಲ ಹಿಮಚ್ಛಾದಿತ ಬೆಟ್ಟಗಳ ವೀಕ್ಷಣೆಗಾಗಿ ವಿಮಾನವು ಪ್ರವಾಸಿಗರನ್ನು ಹೊತ್ತೊಯ್ದು ಹಿಂತಿರುಗುತ್ತಿದ್ದಾಗ  ಸಂಚಾರ ನಿಯಂತ್ರಣ ಗೋಪುರದ ನಿಯಂತ್ರಣ ಕಳೆದುಕೊಂಡ ಕೆಲವೇ ನಿಮಿಷಗಳಲ್ಲಿ ಭೂಮಿಗೆ ಅಪ್ಪಳಿಸಿತು.

ಪ್ರತಿಕೂಲ ಹವಾಮಾನದಿಂದಾಗಿ ಘಟನೆ ಸಂಭವಿಸಿದ ಪ್ರದೇಶಕ್ಕೆ ತೆರಳಲು ಅಡ್ಡಿಯಾಗಿದೆ.

ಮೃತಪಟ್ಟವರು ಬಿಲ್ಡರ್‌ಗಳು
ಪ್ರಜಾವಾಣಿ ವಾರ್ತೆ
ಚೆನ್ನೈ: ನೇಪಾಳದಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟ ತಮಿಳುನಾಡಿನ ಎಂಟು ಮಂದಿಯೂ ಬಿಲ್ಡರ್‌ಗಳಾಗಿದ್ದಾರೆ ಎಂದು ಡಿಎಂಕೆ ಸಂಸತ್ ಸದಸ್ಯ ತಿರುಚ್ಚಿ ಶಿವ ತಿಳಿಸಿದ್ದಾರೆ.
ಎಲ್ಲಾ ಎಂಟು ಜನರು ಕಟ್ಟಡ ನಿರ್ಮಾಣ ಎಂಜಿನಿಯರ್‌ಗಳಾಗಿದ್ದು, ದೇವಾಲಯಗಳ ಪಟ್ಟಣ ತಿರುಚಿನಾಪಳ್ಳಿಯವರಾಗಿದ್ದಾರೆ ಎಂದು ಹೇಳಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳೊಂದಿಗೆ ನಾವು ನಿರಂತರ ಸಂಪರ್ಕದಲ್ಲಿರುವುದಾಗಿ ಸಂಸತ್ ಸದಸ್ಯರು ತಿಳಿಸಿದ್ದಾರೆ.

ಮೃತರ ಸಂಬಂಧಿಕರು ಕಠ್ಮಂಡುವಿಗೆ ತೆರಳುವುದಕ್ಕಾಗಿ ದೆಹಲಿಗೆ ಆಗಮಿಸಿದ್ದು, ಅವರೊಂದಿಗೆ ಸೋಮವಾರ ತಾವೂ ಹೋಗುವ ಸಾಧ್ಯತೆ ಇದೆ ಎಂದೂ ಹೇಳಿದ್ದಾರೆ. ಮೃತಪಟ್ಟ ಎಂಟು ಜನರೂ ರಾಷ್ಟ್ರೀಯ ಬಿಲ್ಡರ್ಸ್‌ ಒಕ್ಕೂಟದ ತಿರುಚಿನಾಪಳ್ಳಿ ಘಟಕದ ಸದಸ್ಯರಾಗಿದ್ದಾರೆ. ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದ್ದ ಅವರು, ನಂತರ ಮೌಂಟ್ ಎವರೆಸ್ಟ್ ಸುತ್ತ ಮುತ್ತಲ ಪ್ರದೇಶಗಳನ್ನು ವೀಕ್ಷಿಸಲು ನೇಪಾಳಕ್ಕೆ ಪ್ರವಾಸ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT