ADVERTISEMENT

ವಿಮಾನ ಅಪಘಾತ: 193ಕ್ಕೆ ಏರಿದ ಸಾವಿನ ಸಂಖ್ಯೆ:ಸತ್ತವರಲ್ಲಿ ಇಬ್ಬರು ಭಾರತೀಯರು

​ಪ್ರಜಾವಾಣಿ ವಾರ್ತೆ
Published 4 ಜೂನ್ 2012, 19:30 IST
Last Updated 4 ಜೂನ್ 2012, 19:30 IST

ಲಾಗೋಸ್, ಕೊಚ್ಚಿ (ಪಿಟಿಐ/ಐಎಎನ್‌ಎಸ್): ನೈಜೀರಿಯಾದಲ್ಲಿ ಭಾನುವಾರ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಸತ್ತವರ ಸಂಖ್ಯೆ 193ಕ್ಕೆ ಏರಿದ್ದು, ಮೃತರಲ್ಲಿ ಇಬ್ಬರು ಭಾರತೀಯರು ಸಹ ಸೇರಿದ್ದಾರೆ.
ಸಿಬ್ಬಂದಿ ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 153 ಜನ ಮೃತಪಟ್ಟಿದ್ದಾರೆ. ವಿಮಾನ ಜನವಸತಿ ಪ್ರದೇಶದಲ್ಲಿ ಬಿದ್ದ ಕಾರಣ  ಕಟ್ಟಡಗಳ ಅಡಿ ಸಿಲುಕಿ ಇನ್ನೂ 40 ಜನ ಸತ್ತಿದ್ದಾರೆ.

ಈ ನತದೃಷ್ಟ ವಿಮಾನದ ಸಹಾಯಕ ಪೈಲಟ್ ಭಾರತದವರಾಗಿದ್ದು, ಅವರನ್ನು ಮಹೇಂದ್ರ ಸಿಂಗ್ ರಾಥೋಡ್ ಎಂದು ಗುರುತಿಸಲಾಗಿದೆ.ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ ಕೇರಳದ ಇಡುಕ್ಕಿ ಜಿಲ್ಲೆಯ ನೆರಿಯಮಂಗಲಂನ ಕಂಪ್ಯೂಟರ್ ಎಂಜಿನಿಯರ್ ರಿಜೊ ಎಲ್ಡೊಸ್ ಸಹ ಸೇರಿದ್ದಾರೆ.

ನೈಜೀರಿಯಾದ ರೆಡ್ಡಿಂಗ್‌ಟನ್‌ನ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಿಜೊ, ಕಂಪೆನಿ ಸಭೆಯಲ್ಲಿ ಭಾಗವಹಿಸಲು ಅಬುಜಾದಿಂದ ಲಾಗೋಸ್‌ಗೆ ತೆರಳುತ್ತಿದ್ದರು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ವಿಮಾನ ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ದುರ್ಘಟನೆಗೆ ಮುನ್ನ ಪೈಲಟ್ ಲಾಗೋಸ್ ವಿಮಾನ ನಿಲ್ದಾಣದ ನಿಯಂತ್ರಣಾ ಕೊಠಡಿಗೆ ತುರ್ತು ಸಂದೇಶ ಕಳುಹಿಸಿದ್ದರು. ವಿಮಾನದ ಬ್ಲಾಕ್‌ಬಾಕ್ಸ್ ಪತ್ತೆಯಾಗಿದ್ದು, ತನಿಖೆಗಾಗಿ ಅಧಿಕಾರಿಗಳಿಗೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.