ADVERTISEMENT

ವಿಶ್ವದ ವಿಸ್ತರಣೆ ಅಧ್ಯಯನ: ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರ ನೊಬೆಲ್

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 13:20 IST
Last Updated 4 ಅಕ್ಟೋಬರ್ 2011, 13:20 IST
ವಿಶ್ವದ ವಿಸ್ತರಣೆ ಅಧ್ಯಯನ: ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರ ನೊಬೆಲ್
ವಿಶ್ವದ ವಿಸ್ತರಣೆ ಅಧ್ಯಯನ: ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರ ನೊಬೆಲ್   

ಸ್ಟಾಕ್  ಹೋಮ್ (ಎಪಿ): ವಿಶ್ವದ ವಿಸ್ತರಣೆ ತೀವ್ರಗೊಳ್ಳುತ್ತಿದೆ ಎಂಬುದನ್ನು ಬಹಿರಂಗಗೊಳಿಸಿದ ತಾರೆಗಳ ಸ್ಫೋಟ ಕುರಿತ ಸಂಶೋಧನೆಗಾಗಿ  ಮೂವರು ಅಮೆರಿಕ ಸಂಜಾತ ವಿಜ್ಞಾನಿಗಳು ಪ್ರಸಕ್ತ ಸಾಲಿನ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ಮಂಗಳವಾರ ಹಂಚಿಕೊಂಡಿದ್ದಾರೆ.

ಅಮೆರಿಕದ ಸಾವುಲ್ ಪರ್ಲ್ಮಟ್ಟರ್ ಅವರು 10 ಕೋಟಿ ಕ್ರೋನರ್ ಗಳ (15 ಕೋಟಿ ಅಮೆರಿಕನ್ ಡಾಲರ್) ಪ್ರಶಸ್ತಿಯನ್ನು ಅಮೆರಿಕ ಸಂಜಾತ ಆಸ್ಟ್ರೇಲಿಯನ್ ವಿಜ್ಞಾನಿ ಬ್ರೈನ್ ಸ್ಮಿತ್ ಹಾಗೂ ಅಮೆರಿಕ ವಿಜ್ಞಾನಿ ಆಡಮ್ ರೀಸ್ ಅವರ ಜೊತೆಗೆ ಹಂಚಿಕೊಂಡಿದ್ದಾರೆ ಎಂದು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿ ಪ್ರಕಟಿಸಿದೆ.

1990ರ ದಶಕದಲ್ಲಿ ಎರಡು ಪ್ರತ್ಯೇಕ ಸಂಶೋಧನಾ ತಂಡಗಳ ಜೊತೆ ಕೆಲಸ ಮಾಡಿದ್ದ ಪರ್ಲ್ಮಟ್ಟರ್ ಅವರು ಒಂದರಲ್ಲಿ ಮತ್ತು ಸ್ಮಿತ್ ಮತ್ತು ರೀಸ್ ಅವರು ಇನ್ನೊಂದು ಸಂಶೋಧನಾ ತಂಡದಲ್ಲಿ ವಿಶ್ವದ ವಿಸ್ತರಣೆ ಬಗ್ಗೆ ಅಧ್ಯಯನ ಕೈಗೊಂಡು ಮಹಾಸ್ಫೋಟ ಅಥವಾ ತಾರಾಸ್ಫೋಟದ ಬಗ್ಗೆ  ವಿಶ್ಲೇಷಿಸಿದ್ದರು.

ದೂರದ 50 ತಾರಾಸ್ಫೋಟಗಳಿಂದ ಬರುತ್ತಿದ್ದ ಬೆಳಕು ನಿರೀಕ್ಷಿದ್ದಕ್ಕಿಂತ ಕ್ಷೀಣವಾಗಿತ್ತು ಎಂಬುದನ್ನು ಈ ವಿಜ್ಞಾನಿಗಳು ಪತ್ತೆ ಹಚ್ಚಿದರು. ಈ ವಿಚಾರವು ವಿಶ್ವವು ತೀವ್ರಗತಿಯಲ್ಲಿ ವಿಸ್ತರಿಸುತ್ತಿದೆ ಎಂಬುದರ ಸುಳಿವು ನೀಡಿತು ಎಂದು ಅಕಾಡೆಮಿ ಹೇಳಿದೆ.

ಹೆಚ್ಚು ಕಡಿಮೆ ಒಂದು ಶತಮಾನ ಕಾಲ ವಿಶ್ವವು 1400 ಕೋಟಿ ವರ್ಷಗಳ ಹಿಂದೆ ಸಂಭವಿಸಿದ ಮಹಾಸ್ಫೋಟದ ಪರಿಣಾಮವಾಗಿ ವಿಸ್ತರಿಸುತ್ತಿದೆ ಎಂದೇ ತಿಳಿಯಲಾಗಿತ್ತು. ಆದರೆ ಈ ವಿಜ್ಞಾನಿಗಳ ಸಂಶೋಧನೆ ದಿಗ್ಭ್ರಮೆ ಮೂಡಿಸಿದೆ ಎಂದು ಅಕಾಡೆಮಿಯ ಪ್ರಶಸ್ತಿ ಪತ್ರ ಹೇಳಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.