ADVERTISEMENT

ವಿಶ್ವಸಂಸ್ಥೆ ಸುಧಾರಣೆ: ಭಾರತದ ನಿರೀಕ್ಷೆಗೆ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 19:30 IST
Last Updated 24 ಏಪ್ರಿಲ್ 2012, 19:30 IST

ವಿಶ್ವಸಂಸ್ಥೆ (ಪಿಟಿಐ): ಭದ್ರತಾ ಮಂಡಳಿ ಸುಧಾರಣಾ ಪ್ರಕ್ರಿಯೆಯು ಕಾಯಂ ಸದಸ್ಯತ್ವ ಹೊಂದಿ ಮಹತ್ವದ ಪಾತ್ರ ನಿರ್ವಹಿಸಲು ಬಯಸಿರುವ ಭಾರತ ಸೇರಿದಂತೆ ಪ್ರಮುಖ ರಾಷ್ಟ್ರಗಳ ನಿರೀಕ್ಷೆಯನ್ನು ತ್ವರಿತವಾಗಿ ಈಡೇರಿಸುವುದು ಎಂದು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ-ಮೂನ್ ಆಶಾಭಾವನೆ ವ್ಯಕ್ತಪಡಿಸಿದರು.

ಬುಧವಾರದಿಂದ ಮೂರು ದಿನಗಳ ಭಾರತ ಭೇಟಿಗೂ ಮುನ್ನ ಮಂಗಳವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, `ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರವಾದ ನಂತರ ಪ್ರಮುಖ ಪಾತ್ರ ನಿರ್ವಹಿಸಬೇಕೆಂಬ ಭಾರತದ ನಿರೀಕ್ಷೆಗಳ ಬಗ್ಗೆ ನಮಗೆ ಅರಿವಿದ್ದು, ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ~ ಎಂದು ತಿಳಿಸಿದರು.

ಭಾರತ ಹಾಗೂ ಪಾಕಿಸ್ತಾನ ತಮ್ಮ ನಡುವಿನ ಸಂಬಂಧಗಳ ಸುಧಾರಣೆ ಮತ್ತು ಬಲವರ್ಧನೆಗಾಗಿ ಇತ್ತೀಚೆಗೆ ಕೈಗೊಂಡಿರುವ ಕ್ರಮಗಳನ್ನು ಬೆಂಬಲಿಸಿದ ಬಾನ್, ಇವು `ಅತ್ಯಂತ ಸಕಾರಾತ್ಮಕ ಮತ್ತು ಪ್ರೋತ್ಸಾಹದಾಯಕ~ ಎಂದು ಬಣ್ಣಿಸಿದರು.  ಇವೆರಡೂ ನೆರೆಯ ದೇಶಗಳು ತಮ್ಮ ದ್ವಿಪಕ್ಷೀಯ ಸಮಾಲೋಚನೆಯನ್ನು ಮುಂದುವರಿಸುವ ಮತ್ತು ಪ್ರಾದೇಶಿಕ ವಲಯದಲ್ಲಿ ಶಾಂತಿ, ಭದ್ರತೆ ಹಾಗೂ ಸೌಹಾರ್ದವನ್ನು ಕಾಪಾಡಲು ಇನ್ನೂ ಮಹತ್ವದ ಪಾತ್ರ ವಹಿಸುವ ವಿಶ್ವಾಸವನ್ನು ಅವರು ಸೂಚಿಸಿದರು.

ADVERTISEMENT

 ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರ ಇತ್ತೀಚಿನ ಭಾರತ ಭೇಟಿಯನ್ನು ಕೊಂಡಾಡಿದ ಅವರು, 2008ರ ಮುಂಬೈ ದಾಳಿಯ ನಂತರ ಎರಡೂ ರಾಷ್ಟ್ರಗಳ ನಡುವೆ ಉಂಟಾಗಿದ್ದ ಕಂದಕವನ್ನು ಈ ಭೇಟಿ ದೂರ ಮಾಡಿದೆ~ ಎಂದರು. ಇದೇ ವೇಳೆ ಭಯೋತ್ಪಾದನೆ ವಿರುದ್ಧ ವಿಶ್ವಸಂಸ್ಥೆ ಸಾರಿರುವ ಸಮರದಲ್ಲಿ ಕೈಜೋಡಿಸಿರುವ ಭಾರತದ ನಿಲುವುನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.

ಇಂದು ಭಾರತಕ್ಕೆ ಮೂನ್

ವಿಶ್ವಂಸ್ಥೆ (ಐಎಎನ್‌ಎಸ್): ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ-ಮೂನ್ ಬುಧವಾರದಿಂದ ತಮ್ಮ ಭಾರತ ಪ್ರವಾಸ ಆರಂಭಿಸುತ್ತಿದ್ದು, ಪ್ರಧಾನಿ ಡಾ. ಮನಮೋಹನ ಸಿಂಗ್ ಮತ್ತಿತರ ಹಿರಿಯ ರಾಜಕೀಯ ಪಕ್ಷಗಳ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ.

ಜಾಮಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಗೌರವ ಪದವಿ ಸ್ವೀಕರಿಸುವ ಅವರು, ನಂತರ ಮುಂಬೈಗೆ ತೆರಳಿ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಮತ್ತು ಪ್ರಮುಖ ವಾಣಿಜ್ಯ ನಾಯಕರೊಂದಿಗೆ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸುವರು ಎಂದು ವಿಶ್ವಸಂಸ್ಥೆ ವಕ್ತಾರ ಎಡ್ವಾರ್ಡೊ ಡೆಲ್ ಬುಯೇ ತಿಳಿಸಿದ್ದಾರೆ. ವಾರಾಂತ್ಯಕ್ಕೆ ಮ್ಯಾನ್ಮಾರ್‌ಗೂ ತೆರಳುವ ಬಾನ್, ಅಲ್ಲಿನ ಪ್ರಜಾಪ್ರಭುತ್ವವಾದಿ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಭೇಟಿಯಾಗಿ ಪ್ರಜಾಪ್ರಭುತ್ವ ಸ್ಥಾಪನೆ, ಬಲಪಡಿಸುವ ಬಗ್ಗೆ ಚರ್ಚಿಸುವರು ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.