ADVERTISEMENT

ವಿಶ್ವ ವಾಣಿಜ್ಯ ಕೇಂದ್ರ ನಿಗಾಕ್ಕೆ ಸೇನಾ ತಂತ್ರಜ್ಞಾನ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 19:30 IST
Last Updated 14 ಫೆಬ್ರುವರಿ 2012, 19:30 IST

ನ್ಯೂಯಾರ್ಕ್ (ಐಎಎನ್‌ಎಸ್/ಇಎಫ್‌ಇ): 1500 ಕೋಟಿ ಡಾಲರ್ ವೆಚ್ಚದಲ್ಲಿ ಮರು ನಿರ್ಮಾಣವಾಗುತ್ತಿರುವ ವಿಶ್ವ ವಾಣಿಜ್ಯ ಕೇಂದ್ರ ಮತ್ತೊಮ್ಮೆ ಉಗ್ರರ ದಾಳಿಗೆ ಗುರಿಯಾಗಲು ಆಸ್ಪದ ನೀಡಬಾರದೆಂದು ನಿರ್ಧರಿಸಿರುವ ಅಮೆರಿಕ, ಅಲ್ಲಿ ಹಿಂದೆಂದೂ ಕಾಣದಂತಹ ಸೇನಾ ತಂತ್ರಜ್ಞಾನದ ಭದ್ರತಾ ಸಾಧನಗಳನ್ನು ಅಳವಡಿಸಲಿದೆ.

ಸಾವಿರಾರು ಚಾಣಾಕ್ಷ್ಯ ಕ್ಯಾಮೆರಾಗಳು, ಮುಖ ಹಾಗೂ ಅಕ್ಷಿಪಟಲದ ಚಹರೆಗಳನ್ನು ಸೆರೆ ಹಿಡಿದು ಅದಾಗಲೇ ಸಂಗ್ರಹಿತವಾದ ಶಂಕಿತರ ಚಹರೆಗಳೊಂದಿಗೆ ತಾಳೆ ಹಾಕುವ ಉಪಕರಣಗಳು ಇತ್ಯಾದಿಗಳು ಇದರಲ್ಲಿ ಸೇರಿವೆ.
ಸ್ಫೋಟಕ ಹಾಗೂ ವಿಕಿರಣಶೀಲ ವಸ್ತುಗಳನ್ನು ಪತ್ತೆಹಚ್ಚಬಲ್ಲ ಇನ್‌ಫ್ರಾರೆಡ್ ಸೆನ್ಸಾರ್‌ಗಳು ಮತ್ತು ಉಷ್ಣ ಗ್ರಾಹಕ ಡಿಟೆಕ್ಟರ್‌ಗಳನ್ನು ಹಾಕಲಾಗುತ್ತದೆ.

ಇವುಗಳ ಜತೆಗೆ, ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ಬಂದರು ಪ್ರಾಧಿಕಾರವು ಅನುಮಾನಾಸ್ಪದ ವರ್ತನೆಗಳ ಮೇಲೆ ಕಣ್ಣಿಟ್ಟ ಪೊಲೀಸರಿಗೆ ಸುಳಿವು ನೀಡಬಲ್ಲ ಕಂಪ್ಯೂಟರ್‌ಗಳನ್ನು ಅಳವಡಿಸುವ ಪ್ರಸ್ತಾವ ಹೊಂದಿದೆ.

ಯಾವೊಬ್ಬ ವ್ಯಕ್ತಿ ಸಾಮಾನ್ಯ ಪಥ ಬಿಟ್ಟು ಬೇರೆ ಪಥದಲ್ಲಿ ಸಾಗುವುದು, ಪಾದಚಾರಿಗಳು ಚಲಿಸುತ್ತಿರುವ ವಿರುದ್ಧ ದಿಕ್ಕಿನಲ್ಲಿ ಯರ‌್ರಾಬಿರ‌್ರಿ ನುಗ್ಗುವುದು, ಅಡೆತಡೆಗಳನ್ನು ಜಿಗಿಯುವುದು, ಬ್ಯಾಗ್ ಅಥವಾ ಕವರ್‌ಗಳನ್ನು ಅನಗತ್ಯ ಸ್ಥಳದಲ್ಲೇ ಬಿಡುವುದು ಇತ್ಯಾದಿಗಳನ್ನು ಮಾಡಿದರೆ ಈ ಕಂಪ್ಯೂಟರ್‌ಗಳು ಪೊಲೀಸರಿಗೆ ತಕ್ಷಣವೇ ಮಾಹಿತಿ ರವಾನಿಸಲಿವೆ.

ಈಗ ಅಳವಡಿಸಲು ಉದ್ದೇಶಿಸಿರುವ ವರ್ತನಾ ಕಣ್ಗಾವಲು ಕ್ಯಾಮೆರಾಗಳಿಗೆ ಹೋಲಿಸಿದರೆ ಈಗ ಬಳಕೆಯಲ್ಲಿರುವ ಸಾಂಪ್ರದಾಯಿಕ ಭದ್ರತಾ ಕ್ಯಾಮೆರಾಗಳು ಓಬೀರಾಯನ ಕಾಲದವು ಎಂದು ಬಿಹೇವಿಯರಲ್ ರೆಕಗ್ನಿಷನ್ ಸಿಸ್ಟಮ್ಸ ಕಂಪೆನಿಯ ಅಧ್ಯಕ್ಷ ಜಾನ್ ಫ್ರಾಜ್ಜಿನಿ ಹೇಳಿದ್ದಾರೆ. ಈ ಕೇಂದ್ರದ ಕಾಮಗಾರಿ 2013ರಲ್ಲಿ ಪೂರ್ಣಗೊಳ್ಳುವ ಅಂದಾಜಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.