ADVERTISEMENT

ವೈದ್ಯನ ಮೌಢ್ಯಕ್ಕೆ ಹಸುಳೆ ಬಲಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 19:30 IST
Last Updated 17 ಸೆಪ್ಟೆಂಬರ್ 2011, 19:30 IST

ಬೀಜಿಂಗ್, (ಪಿಟಿಐ): ಚೀನಾದ ವೈದ್ಯರೊಬ್ಬರ ಮೌಢ್ಯಕ್ಕೆ ನವಜಾತ ಶಿಶುವೊಂದು ಬಲಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಲೀ ಕ್ಜಿಯಾಕಿನ್ ಎಂಬ ತುಂಬು ಗರ್ಭಿಣಿ ಹೆರಿಗೆಗಾಗಿ ಯಾಂಗ್‌ಜಿಯಾಂಗ್ ನಗರದ ಪೀಪಲ್ಸ್ ಆಸ್ಪತ್ರೆಗೆ ಆಗಸ್ಟ್ 12ರಂದು ದಾಖಲಾಗಿದ್ದರು. ಅಂದು ಹೆರಿಗೆಯಾಗದ ಕಾರಣ ಆ.13ರಂದು ಶಸ್ತ್ರಚಿಕಿತ್ಸೆ ಮಾಡುವಂತೆ ವೈದ್ಯರನ್ನು ಕೋರಿದ್ದರು.  ಅಂದು ಚೀನಾದಲ್ಲಿ `ಭೂತದ ಹಬ್ಬ~ ಇದ್ದಕಾರಣ ಶಸ್ತ್ರಚಿಕಿತ್ಸೆ ಮಾಡಲು ವೈದ್ಯ ಝೆಂಗ್ ಯುನ್ನಾ ನಿರಾಕರಿಸಿದರು. 13 ಸಂಖ್ಯೆ ಶುಭಸೂಚಕವಲ್ಲ ಮತ್ತು`ಭೂತದ ಹಬ್ಬ~ದ ದಿನ ಹುಟ್ಟುವ ಮಗು ಅಪಶಕುನ ಎಂಬುದು ಅವರ ನಂಬಿಕೆಯಾಗಿತ್ತು.

ಹೀಗಾಗಿ ಮರು ದಿನ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದ ಮಗು ಮೂರು ದಿನಗಳ ನಂತರ ಸಾವನ್ನಪ್ಪಿತು. ಇದಕ್ಕೆ ವೈದ್ಯರ ಮೂಢನಂಬಿಕೆಯೇ ಕಾರಣ ಎಂದು ದೂರಿ ಮಹಿಳೆ ಮತ್ತು ಕುಟುಂಬದವರು ಭಾರಿ ಮೊತ್ತದ ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಇದನ್ನು ನಿರಾಕರಿಸಿರುವ ವೈದ್ಯರು, ಗರ್ಭಿಣಿ ಕುಟುಂಬದ ಕೋರಿಕೆಯ ಮೇರೆಗೆ ತಾವು ಶಸ್ತ್ರಚಿಕಿತ್ಸೆಗೆ ವಿಳಂಬ ಮಾಡಿದ್ದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.