ADVERTISEMENT

ವೈರ್‌ಲೆಸ್ ಹೃದಯ ಪಂಪ್ ಅಭಿವೃದ್ಧಿ...

​ಪ್ರಜಾವಾಣಿ ವಾರ್ತೆ
Published 12 ಮೇ 2012, 19:30 IST
Last Updated 12 ಮೇ 2012, 19:30 IST

ಸೆಂಡೈ (ಕ್ಯೊಡೊ): ವೈರ್‌ಲೆಸ್ ಮೂಲಕ ನಿಯಂತ್ರಿಸಬಹುದಾದ ಯಾಂತ್ರಿಕ ಹೃದಯ ಪಂಪ್‌ನ್ನು ತೊಹೊಕು ವಿಶ್ವವಿದ್ಯಾಲಯದ ತಜ್ಞರ ತಂಡ ಅಭಿವೃದ್ಧಿ ಪಡಿಸಿದೆ.

ಆ ಮೂಲಕ, ವಿಶ್ವದ ಮೊದಲ ಕೃತಕ ಹೃದಯವನ್ನು ರೂಪಿಸುವತ್ತ ವಿಜ್ಞಾನಿಗಳು ದಾಪುಗಾಲು ಇಟ್ಟಿದ್ದಾರೆ.
ಈ ಹೃದಯ ಪಂಪ್, `ಸಿ~ ಬ್ಯಾಟರಿ ಗಾತ್ರ ಹೊಂದಿದೆ. ಇದು ಮಾನವನ ಹೃದಯದಷ್ಟೇ, ಅಂದರೆ ಪ್ರತಿ ನಿಮಿಷಕ್ಕೆ ಐದು ಲೀಟರ್ ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯಹೊಂದಿದೆ ಎಂದು ಪ್ರೊಫೆಸರ್ ಕಜುಶಿ ಇಶಿಯಾಮ ನೇತೃತ್ವದ ತಜ್ಞರ ತಂಡ ಹೇಳಿದೆ.

ಸಿಲಿಂಡರ್ ಆಕಾರದ ಅಯಸ್ಕಾಂತದ ತಿರುಗುವಿಕೆಯಿಂದ ಈ ಪಂಪ್ ಕಾರ್ಯ ನಿರ್ವಹಿಸುತ್ತದೆ. ದೇಹದ ಹೊರಭಾಗದಲ್ಲಿರಿಸಿಕೊಂಡ ಸಾಧನದ ಮೂಲಕವೇ ಈ ಪಂಪ್‌ನ್ನು ಚಾಲನೆಗೊಳಿಸಬಹುದು. ಪ್ರಾಣಿಗಳ ಮೇಲೆ ನಡೆಸಿದ ಪರೀಕ್ಷೆಯಲ್ಲಿ ಈ ಪಂಪ್ ಬಳಸಿದ ಕೃತಕ ಹೃದಯವು ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ.

ಸಾಂಪ್ರದಾಯಿಕ ಯಾಂತ್ರಿಕ ಪಂಪಿಂಗ್ ವ್ಯವಸ್ಥೆಯು ಗಾತ್ರದಲ್ಲಿ ಹಿರಿದಾಗಿದ್ದು ಮಾನವನ ದೇಹದಲ್ಲಿ ಅಳವಡಿಸಲು ಕಷ್ಟ ಸಾಧ್ಯ. ಇವುಗಳಿಗೆ ಪ್ರತ್ಯೇಕವಾಗಿ ವಿದ್ಯುತ್ ಸಂಪರ್ಕ ಒದಗಿಸಬೇಕಾದ ಅಗತ್ಯವೂ ಇರುತ್ತದೆ.

ಈಗ ಅಭಿವೃದ್ಧಿ ಪಡಿಸಲಾಗಿರುವ ಪಂಪ್‌ನ್ನು ವೈದ್ಯಕೀಯ ಬಳಕೆಗೆ ಅನ್ವಯಿಸುವುದಕ್ಕೂ ಮೊದಲು ಸಂಶೋಧಕರ ತಂಡವು ಪ್ರಾಣಿಗಳ ಮೇಲೆ ನಡೆಸುತ್ತಿರುವ ಪ್ರಯೋಗವನ್ನು ಇನ್ನಷ್ಟು ಅವಧಿಯವರೆಗೆ ಮುಂದುವರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.