ADVERTISEMENT

ಶೀಘ್ರ 10 ಲಕ್ಷ ದಾಖಲೆ ಬಿಡುಗಡೆ

ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್ ಘೋಷಣೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 19:59 IST
Last Updated 21 ಡಿಸೆಂಬರ್ 2012, 19:59 IST
ಶೀಘ್ರ 10 ಲಕ್ಷ ದಾಖಲೆ ಬಿಡುಗಡೆ
ಶೀಘ್ರ 10 ಲಕ್ಷ ದಾಖಲೆ ಬಿಡುಗಡೆ   

ಲಂಡನ್ (ಎಎಫ್‌ಪಿ): ಹೊಸ ವರ್ಷದಲ್ಲಿ ಎಲ್ಲ ದೇಶಗಳಿಗೆ ಸಂಬಂಧಿಸಿದ ಹತ್ತು ಲಕ್ಷ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿರುವ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್, ಇದು ಜಗತ್ತಿನಾದ್ಯಂತ ಪರಿಣಾಮ ಉಂಟು ಮಾಡಲಿದೆ ಎಂದಿದ್ದಾರೆ.

ಕಳೆದ ಆರು ತಿಂಗಳಿಂದ ಲಂಡನ್‌ನಲ್ಲಿರುವ ಈಕ್ವೇಡಾರ್ ರಾಯಭಾರಿ ಕಚೇರಿಯಲ್ಲಿ ಆಶ್ರಯ ಪಡೆದಿರುವ ಅಸಾಂಜ್ ಅವರು, ಕ್ರಿಸ್‌ಮಸ್ ಅಂಗವಾಗಿ ತಮ್ಮ ಅಭಿಮಾನಿಗಳಿಗೆ ನೀಡಿದ ಸಂದೇಶದಲ್ಲಿ ದಾಖಲೆಗಳನ್ನು ಬಹಿರಂಗಪಡಿಸುವ ಈ ಘೋಷಣೆ ಮಾಡಿದ್ದಾರೆ.

 ಅಸಾಂಜ್ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ನಡೆಸಿದ ಆರೋಪ ಹೊರಿಸಲಾಗಿದ್ದು, ತಾವು ಸ್ವೀಡನ್‌ಗೆ ಹಸ್ತಾಂತರವಾಗುವುದನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಇಲ್ಲಿ ನೆಲೆಸಿದ್ದಾರೆ. ಪ್ರಸಕ್ತ ವರ್ಷದಲ್ಲಿ ಸಿರಿಯಾ ಮತ್ತು ಇತರ ದೇಶಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಈ ವರ್ಷ ಬಹಳ ಮಹತ್ವದ್ದೆಂದು ಬಾಲ್ಕನಿಯಲ್ಲಿ ನಿಂತು ಅಸಾಂಜ್ ಹೇಳುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ಅಭಿಮಾನಿಗಳು ಸಂಭ್ರಮಿಸಿದರು.

`2012ರಂತೆ ಮುಂದಿನ ವರ್ಷ ಕೂಡ ಇದೇ ರೀತಿ ಮುಂದುವರಿಯುತ್ತೇನೆ. ವಿಕಿಲೀಕ್ಸ್ ಈಗಾಗಲೇ ಹತ್ತು ಲಕ್ಷ ದಾಖಲೆಗಳನ್ನು ಸಿದ್ಧಪಡಿಸಿದೆ. ವಿಶ್ವದ ಎಲ್ಲ ರಾಷ್ಟ್ರಗಳ ಮೇಲೆ ಇದು ಪರಿಣಾಮ ಬೀರಲಿದೆ' ಎಂದು ತಿಳಿಸಿದರು.

ರಾಯಭಾರ ಕಚೇರಿಯಲ್ಲಿ ಆಶ್ರಯ ನೀಡಿರುವುದಕ್ಕೆ ಈಕ್ವೇಡಾರ್ ಅಧ್ಯಕ್ಷ ರಫೆಲ್ ಅವರಿಗೆ ಕೃತಜ್ಞತೆ ಸಲ್ಲಿಸಿದ ಅಸಾಂಜ್, ಅಮೆರಿಕ ಮತ್ತು ಕೆಲ ಪಾಶ್ಚಿಮಾತ್ಯ ರಾಷ್ಟ್ರಗಳ ವಿರುದ್ಧ ಹರಿಹಾಯ್ದರು. ಆಗಸ್ಟ್ 19ರಂದು ಇದೇ ಬಾಲ್ಕನಿಯಲ್ಲಿ ಕಾಣಿಸಿಕೊಂಡಿದ್ದ ಅಸಾಂಜ್, ಸಾರ್ವಜನಿಕವಾಗಿ ಮತ್ತೆ ಕಾಣಿಸಿಕೊಳ್ಳುತ್ತಿರುವುದು ಈಗಲೇ.

ಸದ್ಯ ಅನಾರೋಗ್ಯದಿಂದ ಬಳಲುತ್ತಿರುವ ಅಸಾಂಜ್, ಈಕ್ವೇಡಾರ್ ಅಥವಾ ಆಸ್ಪತ್ರೆಗೆ ತೆರಳಲು ಅವಕಾಶ ನೀಡುವಂತೆ ಕೋರಿದ್ದ ಮನವಿಯನ್ನು ಬ್ರಿಟನ್ ನಿರಾಕರಿಸಿದೆ. `ಕಾನೂನಿನ ತೊಡಕಿನಿಂದಾಗಿ ಸ್ವೀಡನ್‌ಗೆ ಹಸ್ತಾಂತರಿಸುವುದನ್ನು ಬಿಟ್ಟರೆ ಅನ್ಯ ದಾರಿಯಿಲ್ಲ' ಎಂದು ಬ್ರಿಟನ್ ಹೇಳಿದೆ.

ಒಂದು ವೇಳೆ ಸ್ವೀಡನ್‌ಗೆ ಹಸ್ತಾಂತರಿಸಿದರೆ, ಅಮೆರಿಕ ಸೇನೆಗೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡಿರುವುದಕ್ಕಾಗಿ ಅಮೆರಿಕದ ವಶಕ್ಕೆ ಒಪ್ಪಿಸಲಾಗುತ್ತದೆ. ಬಳಿಕ ಅಮೆರಿಕವು ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ಕೂಡ ವಿಧಿಸಬಹುದೆಂದು ಅವರು  ಹೇಳಿದರು.

ಬ್ರಿಟನ್‌ಗೆ ಈಕ್ವೇಡಾರ್ ಪ್ರಶ್ನೆ
ಕ್ವಿಟೊ (ಐಎಎನ್‌ಎಸ್):
`ಜೂಲಿಯನ್ ಅಸಾಂಜ್‌ಗೆ ಆಶ್ರಯ ಕಲ್ಪಿಸಲು ಆಹ್ವಾನ ನೀಡುವ ಸಂಪೂರ್ಣ ಹಕ್ಕು ನಮ್ಮಗಿದೆ. ಆದರೆ, ಈ ವಿಷಯದಲ್ಲಿ ಬ್ರಿಟನ್‌ನಿಂದ ನಮಗೆ ಯಾವುದೇ ಸಹಕಾರ ದೊರೆತಿಲ್ಲ' ಎಂದು ಈಕ್ವೇಡಾರ್ ವಿದೇಶಾಂಗ ಸಚಿವ ರಿಕಾರ್ಡೊ ಪ್ಯಾಟಿನೊ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.