ವಾಷಿಂಗ್ಟನ್ (ಪಿಟಿಐ): ರಾತ್ರಿಪಾಳಿಯಲ್ಲಿ ಕೆಲಸ ಮಾಡುವವರಿಗೆ ಅಮೆರಿಕದ ಸಂಶೋಧಕ ವಲಯದಿಂದ ಕಹಿ ಸುದ್ದಿ ಬಂದಿದೆ. ರಾತ್ರಿಪಾಳಿಗಳಲ್ಲಿ ಕೆಲಸ ಮಾಡುವುದೆಂದರೆ ಸಕ್ಕರೆ ಕಾಯಿಲೆ (ಮಧುಮೇಹ) ಜತೆ ಸರಸ ಆಡಿದಂತೆ ಎನ್ನುತ್ತದೆ ಹೊಸ ಅಧ್ಯಯನ.
ಹೆಚ್ಚಾಗಿ ರಾತ್ರಿಪಾಳಿಯಲ್ಲಿ ಕೆಲಸ ಮಾಡುವುದರಿಂದ ರಕ್ತದಲ್ಲಿಯ ಸಕ್ಕರೆ ಅಂಶ ಜೀರ್ಣವಾಗುವ ಶಕ್ತಿ ಕುಗ್ಗುತ್ತದೆ. ಇದು ಟೈಪ್-2 ಮಧುಮೇಹಕ್ಕೆ ಕಾರಣವಾಗುತ್ತದೆ ಎನ್ನುವುದು ಸಂಶೋಧನೆಯ ಸಾರಾಂಶ.
ಇದಕ್ಕಾಗಿ ಸಂಶೋಧಕರು 13 ಆರೋಗ್ಯವಂತ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಅವರ್ಯಾರೂ ಸ್ಥೂಲ ಕಾಯದವರಾಗಿರಲಿಲ್ಲ. ಈ ಮೊದಲು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದ ಇತಿಹಾಸವನ್ನೂ ಹೊಂದಿರಲಿಲ್ಲ ಎನ್ನುವುದು ಗಮನಾರ್ಹ. ಈ ಎಲ್ಲ ಜನರನ್ನೂ ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ನಿಯೋಜಿಸಲಾಗಿತ್ತು. ಎಲ್ಲರಿಗೂ ಒಂದೇ ಬಗೆಯ ಊಟ, ತಿಂಡಿ, ತಿನಿಸು ಮತ್ತು ವಾತಾವರಣ ಕಲ್ಪಿಸಲಾಗಿತ್ತು.
ಹಗಲು ಮತ್ತು ರಾತ್ರಿ ಕೆಲಸಗಾರರ ರಕ್ತ ಸಕ್ಕರೆ ಪ್ರಮಾಣ ತಾಳೆ ಹಾಕಿದಾಗ ರಾತ್ರಿಪಾಳಿ ಕೆಲಸಗಾರರಲ್ಲಿ ಶೇ16ರಷ್ಟು ವ್ಯತ್ಯಾಸ ಕಂಡುಬಂತು. ಊಟದ ಒಂದು ಅಥವಾ ಒಂದೂವರೆ ಗಂಟೆಯ ನಂತರ ಇನ್ಸುಲಿನ್ ಪ್ರಮಾಣವೂ ಶೇ40ರಿಂದ 50ರಷ್ಟು ಹೆಚ್ಚಿರುವುದು ಪತ್ತೆಯಾಗಿದೆ.
ಇದು ಕೇವಲ ಒಂದು ದಿನ ಮತ್ತು ರಾತ್ರಿ ಮಟ್ಟಿಗೆ ಕೆಲಸ ಮಾಡಿದ ಆರೋಗ್ಯವಂತ ವ್ಯಕ್ತಿಗಳ ರಕ್ತ ಪರೀಕ್ಷೆ ಅಂಕಿ, ಅಂಶಗಳು ಮಾತ್ರ. ನಿರಂತರ ಅಥವಾ ಹೆಚ್ಚಾಗಿ ರಾತ್ರಿಪಾಳಿಯಲ್ಲಿ ಕೆಲಸ ಮಾಡುವವರ ರಕ್ತ ಸಕ್ಕರೆ ಪ್ರಮಾಣ ಸಹಜವಾಗಿ ಹೆಚ್ಚಿರುತ್ತದೆ ಎನ್ನುವುದು ಬಾಸ್ಟನ್ ವೈದ್ಯಕೀಯ ಕಾಲೇಜಿನ ಸಂಶೋಧಕ ಕ್ರಿಸ್ಟೋಫರ್ ಮಾರಿಸ್ ಅವರ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.