ADVERTISEMENT

ಸಜೀವ ಯಕೃತ್ತು ಕಸಿ: ಭಾರತ- ಪಾಕ್ ಸಹಯೋಗ, ಇತಿಹಾಸ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 11:00 IST
Last Updated 11 ಫೆಬ್ರುವರಿ 2012, 11:00 IST

ಲಾಹೋರ್ (ಪಿಟಿಐ): ಪಾಕಿಸ್ತಾನದಲ್ಲಿ ಮೊತ್ತ ಮೊದಲ ಬಾರಿಗೆ ನಡೆದ ಐತಿಹಾಸಿಕ ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆ ನೆರವೇರಿಸುವಲ್ಲಿ ಪಾಕಿಸ್ತಾನಿ ವೈದ್ಯರೊಂದಿಗೆ ಭಾರತೀಯ ವೈದ್ಯರ ತಂಡವೊಂದು ನೆರವಿನ ಹಸ್ತ ನೀಡಿ ಮಾನವೀಯತೆ ಮೆರೆಯುವುದರ ಜೊತೆಗೆ ಇತಿಹಾಸ ಸೃಷ್ಟಿಸಿದೆ.

ಲಾಹೋರಿನ ಶೇಕ್ ಝಯೀದ್ ಆಸ್ಪತ್ರೆಯಲ್ಲಿ ಶುಕ್ರವಾರ ಈ ಸಜೀವ ದಾನಿಯ ಯಕೃತ್ತಿನ ಕಸಿ ಶಸ್ತ್ರ ಚಿಕಿತ್ಸೆ ನಡೆಸಲಾಯಿತು ಎಂದು ಅಧಿಕಾರಿಗಳು ಶನಿವಾರ ಇಲ್ಲಿ ತಿಳಿಸಿದರು.

ಸಜೀವ ದಾನಿಯ ಯಕೃತ್ತಿನ ಕಸಿ ಅತ್ಯಂತ ಸಂಕೀರ್ಣ ಹಾಗೂ ಸೂಕ್ಷ್ಮ ಶಸ್ತ್ರಚಿಕಿತಸೆಯಾಗಿದ್ದು ದಾನ ನೀಡುವ ಹಾಗೂ ದಾನ ಪಡೆಯುವ ಇಬ್ಬರು ವ್ಯಕ್ತಿಗಳ ಜೀವಕ್ಕೂ ಅಪಾಯವಾಗುವ ಸಾಧ್ಯತೆ ಇರುತ್ತದೆ ಎಂದು ವೈದ್ಯರು ಹೇಳಿದರು.

ಜಂಟಿ ಶಸ್ತ್ರಚಿಕಿತ್ಸೆಗಳನ್ನು ಹಿರಿಯ ಕಸಿ ತಜ್ಞ ಭಾರತೀಯ ಸರ್ಜನ್ ದೆಹಲಿಯ ಅಪೋಲೋ ಆಸ್ಪತ್ರೆಯ ಡಾ. ಸುಭಾಶ್ ಗುಪ್ತ ಮತ್ತು ಅವರ ಮೂವರು ಸಹೋದ್ಯೋಗಿಗಳು ಹಾಗೂ ತಾರಿಖ್ ಬಂಗಾಶ್, ಖವಾರ್ ಶಹಝಾದ್ ಮತ್ತು ಉಮರ್ ಅಲಿ ಅವರನ್ನು ಒಳಗೊಂಡ ಮೂವರು ಪಾಕಿಸ್ತಾನಿ ವೈದ್ಯರ ತಂಡ ನೆರವೇರಿಸಿತು.

ಪಾಕಿಸ್ತಾನದಲ್ಲಿ ಸಜೀವ ದಾನಿ- ಬಂಧುವಿನ ಯಕೃತ್ತು ಕಸಿ ನೆರವೇರಿಸುವ ಮೂಲಕ ಭಾರತ ಮತ್ತು ಪಾಕಿಸ್ತಾನಿ ಕಸಿ ಶಸ್ತ್ರಚಿಕಿತ್ಸಕರು ಸಜೀವ ಯಕೃತ್ತು ಕಸಿ ಕ್ಷೇತ್ರದಲ್ಲಿ ಹೊಸ ಚರಿತ್ರೆ ಬರೆದಿದ್ದಾರೆ ಎಂದು ಬಂಗಿಷ್ ಬಣ್ಣಿಸಿದರು.

ಖನಮ್ ಮೌಲಾ ಅವರಿಗೆ ಮೊದಲ ಯಕೃತ್ತಿನ ಕಸಿಯನ್ನು ಮಾಡಲಾಯಿತು. ನಿಕಟ ಬಂಧು ಇರ್ಷಾದ್ ಬೀಬಿ ಮೌಲಾ ಅವರಿಗೆ ತಮ್ಮ ಯಕೃತ್ತು ದಾನ ಮಾಡಿದರು. ಇನ್ನೊಂದು ಯಕೃತ್ತಿನ ಕಸಿಯನ್ನು 45ರ ಹರೆಯದ ಅಬಿದಾ ಪರ್ವೀನ್ ಅವರಿಗೆ ನೆರವೇರಿಸಲಾಯಿತು. 19ರ ಹರೆಯದ ಪುತ್ರ ತನ್ನ ತಾಯಿಗೆ ಯಕೃತ್ತು ದಾನ ಮಾಡಿದರು.

ಉಭಯ ಶಸ್ತ್ರ ಚಿಕಿತ್ಸೆಗಳನ್ನು ಪೂರೈಸಲು ವೈದ್ಯರ ತಂಡಕ್ಕ ತಲಾ 12 ಗಂಟೆಗಳು ಬೇಕಾದುವು. ಯಕೃತ್ತು ದಾನ ಪಡೆದ ಇಬ್ಬರು ರೋಗಿಗಳನ್ನೂ ಅವರು ಯಕೃತ್ತುಗಳು ಸಂಪೂರ್ಣ ವಿಫಲಾವಸ್ಥೆಯಲ್ಲಿದ್ದಾಗ ಶೇಖ್ ಝಯೀದ್ ಆಸ್ಪತ್ರೆಗೆ ಕರೆ ತರಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.