ADVERTISEMENT

ಸಾರ್ವಜನಿಕವಾಗಿ ಕ್ಷಮೆ ಕೇಳಿದ ರವಿ

​ಪ್ರಜಾವಾಣಿ ವಾರ್ತೆ
Published 30 ಮೇ 2012, 19:30 IST
Last Updated 30 ಮೇ 2012, 19:30 IST

ನ್ಯೂಯಾರ್ಕ್ (ಪಿಟಿಐ): ತನ್ನ ಜೊತೆ ವಾಸವಾಗಿದ್ದ ಸಲಿಂಗಕಾಮಿ ಗೆಳೆಯನ ಕಾಮಕೇಳಿಗಳನ್ನು ವೆಬ್‌ಕ್ಯಾಮ್ ಮೂಲಕ ರಹಸ್ಯವಾಗಿ ಸೆರೆ ಹಿಡಿದ ಪ್ರಕರಣದಲ್ಲಿ ತಪ್ಪಿತಸ್ಥನಾಗಿರುವ ಭಾರತೀಯ ಮೂಲದ ವಿದ್ಯಾರ್ಥಿ ಧರುಣ್ ರವಿ ಇದೇ ಮೊದಲ ಬಾರಿಗೆ ತನ್ನ ವರ್ತನೆಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾನೆ.

ಒಂದು ತಿಂಗಳ ಜೈಲು ಶಿಕ್ಷೆ ಅನುಭವಿಸಲು ತಾನು ಈ ವಾರ ಶರಣಾಗುವುದಾಗಿಯೂ ರವಿ ಹೇಳಿದ್ದಾನೆ.
ತನ್ನ ಜೊತೆ ವಾಸವಾಗಿದ್ದ ಟೇಲರ್ ಕ್ಲೆಮೆಂಟಿ ಮತ್ತೊಬ್ಬ ಪುರುಷನೊಂದಿಗೆ ಕಾಮಕೂಟ ನಡೆಸುತ್ತಿರುವುದನ್ನು 2010ರ ಸೆಪ್ಟೆಂಬರ್ ತಿಂಗಳಲ್ಲಿ ಎರಡು ಬಾರಿ ವೆಬ್‌ಕ್ಯಾಮ್ ಮೂಲಕ  ಚಿತ್ರೀಕರಿಸಿದ್ದ ಹಾಗೂ ಅದನ್ನು ವೀಕ್ಷಿಸಿದ್ದು `ಮೂರ್ಖತನ ಮತ್ತು ಬಾಲಿಶ~ ವರ್ತನೆಯಾಗಿದ್ದು, ಅದಕ್ಕಾಗಿ ವಿಷಾದಿಸುವುದಾಗಿ ರವಿ ಹೇಳಿದ್ದಾನೆ. ಆದರೆ ಈ ಕೃತ್ಯವನ್ನು ದ್ವೇಷದಿಂದ ಎಸಗಿಲ್ಲ ಎಂದೂ  ಆತ ಸ್ಪಷ್ಟಪಡಿಸಿದ್ದಾನೆ.

`ನಾನು ಮಾಡಿರುವ ತಪ್ಪಿನಿಂದಾಗಿ ತೊಂದರೆಗೆ ಒಳಗಾದವರ ಕ್ಷಮೆಯನ್ನು ಕೇಳುತ್ತೇನೆ~ ಎಂದು 20 ವರ್ಷದ ರವಿ ಹೇಳಿಕೆಯಲ್ಲಿ ತಿಳಿಸಿದ್ದಾನೆ.ತನ್ನ ಖಾಸಗಿ ಕ್ಷಣಗಳನ್ನು ರವಿ ಕ್ಯಾಮೆರಾದಲ್ಲಿ ಸೆರೆ ಹಿಡಿದು ಬಹಿರಂಗಗೊಳಿಸಿದ ವಿಷಯ ತಿಳಿಯುತ್ತಿದ್ದಂತೆಯೇ ಟೇಲರ್ ಕ್ಲೆಮೆಂಟಿ ಆತ್ಮಹತ್ಯೆ ಮಾಡಿಕೊಂಡಿದ್ದ.

ರಟ್ಜರ್ಸ್‌ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿಯಾಗಿರುವ ರವಿ ತನ್ನ ವರ್ತನೆ ಬಗ್ಗೆ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾನೆ.ಪ್ರಕರಣದ ವಿಚಾರಣೆ ವೇಳೆ ಕ್ಷಮಾಪಣೆ ಕೇಳದೇ ಇದ್ದುದಕ್ಕಾಗಿ ಮತ್ತು ಕ್ಯಾಮೆರಾದಲ್ಲಿ ಸೆರೆ ಹಿಡಿದ ದೃಶ್ಯಗಳನ್ನು ನೋಡಲು ತನ್ನ ಗೆಳೆಯರಿಗೆ ಆಹ್ವಾನ ನೀಡಿದ್ದಕ್ಕೆ ರವಿ ವಿರುದ್ಧ ಭಾರಿ ಟೀಕೆ ವ್ಯಕ್ತವಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.